ಕುಡಿಯುವ ನೀರಿಗೆ ಹಾಹಾಕಾರ; ಖಾಲಿ ಕೊಡಗಳೊಂದಿಗೆ ಪಂಚಾಯತ್ ಎದುರು ಪ್ರತಿಭಟನೆ
ಲೋಕದರ್ಶನ ವರದಿ
ಮುಂಡಗೋಡ 18 : ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಪೂರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕುಡಿಯಲು ಮತ್ತು ದೈನಂದಿನ ಬಳಕೆಗೆ ನೀರು ಸಿಗದೇ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಅನಿವಾರ್ಯವಾಗಿ ಮಳೆ ನೀರನ್ನು ಸೋಸಿ ಬಳಕೆ ಮಾಡುತ್ತಿರುವುದಾಗಿ ಗ್ರಾಮಸ್ಥರು ಅಳಲು ತೋಡಿಕೊಂಡರು.
ನೀರು ಪೂರೈಕೆಯ ಜವಾಬ್ದಾರಿ ಹೊಂದಿದ್ದ ವಾಟರ್ಮನ್ ಯಾವುದೇ ಮುನ್ಸೂಚನೆ ನೀಡದೆ ಕೆಲಸಕ್ಕೆ ಗೈರುಹಾಜರಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು, ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹೊಸ ವಾಟರ್ಮನ್ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಜೊತೆಗೆ (ಎಎಒ) ಯೋಜನೆಯಡಿ ಹೊಸ ಪಂಪ್ ಮೋಟಾರ್ ಅಳವಡಿಸಿ, ಹಳೆಯ ಮೋಟಾರ್ಗಳನ್ನು ದುರಸ್ತಿಗೊಳಿಸುವ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ವಿತಾ ಅವರು ಗ್ರಾಮಸ್ಥರ ಮನವಿ ಆಲಿಸಿ, ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಾಗಿ ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಗ್ರಾಮಸ್ಥರು, ಮಹಿಳೆಯರು ಹಾಗೂ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.