ಡಾ. ಚನ್ನವೀರ ಕಣವಿಯವರು ಕಾವ್ಯ ಲೋಕದ ಧ್ರುವತಾರೆ: ತರೀಕೆರೆ
ಧಾರವಾಡ 29: ನಾಡೋಜ ಡಾ. ಚನ್ನವೀರ ಕಣವಿಯವರಿಗೆ ಕಾವ್ಯವೇ ಜೀವಾಳವಾಗಿತ್ತು. ಪ್ರಕೃತಿ ಪ್ರಿಯರಾದ ಅವರಿಗೆ ಧಾರವಾಡದ ಮಳೆ ಕಾವ್ಯಕ್ಕೆ ಪ್ರೇರಣೆ. ಮೃದು ಸ್ವಭಾವದ ಕಣವಿಯವರು ಅವರು ಕಾವ್ಯ ಲೋಕದ ಧ್ರುವತಾರೆ ಎಂದು ಹೊಸಪೇಟೆ ವಿಮರ್ಶಕ ಡಾ. ರೆಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡದ ಯುವ ಲೇಖಕರಿಗೆ ಆಯೋಜಿಸಿದ್ದ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ರಾಜ್ಯದ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ದಂಪತಿಗಳು ಅಪರೂಪ. ಡಾ. ಚೆನ್ನವೀರ ಕಣವಿ ಕಾವ್ಯ ಲೋಕದಲ್ಲಿ ಮಿನುಗುತಾರೆಯಂತಿದ್ದರೆ, ಶಾಂತಾದೇವಿ ಕಣವಿ ಒಬ್ಬ ಶ್ರೇಷ್ಠ ಕಥೆಗಾರರಾಗಿದ್ದರು. ಆದರೆ ಚೆನ್ನವೀರ ಕಣವಿ ಅವರಿಗೆ ಸಿಕ್ಕಷ್ಟು ಮನ್ನಣೆ ಶಾಂತಾದೇವಿ ಕಣವಿಯವರ ಕಥೆಗಳಿಗೆ ಸಿಗದೇ ಇರುವುದು ಬೇಸರ. ಕಣವಿಯವರು ನಿಸರ್ಗವನ್ನು ಗುರುವಾಗಿ ಪ್ರೀತಿಸಿದವರು. ನಿಸರ್ಗದ ಮನಮೋಹಕ ದೃಶ್ಯಗಳನ್ನು ತಮ್ಮ ಕಾವ್ಯದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಧಾರವಾಡ ಅನೇಕ ಕವಿಗಳ ಜೊತೆ ಅವರದು ಅವಿನಾಭಾವ ಸಂಬಂಧವಿತ್ತು. ನಿಸರ್ಗದ ಜೊತೆ ಸಹಬಾಳ್ವೆ ಅಗತ್ಯ ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಕಾವ್ಯ ಮತ್ತು ಕಥೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಡಾ. ಜಿ. ಎಂ. ಹೆಗಡೆ ಮಾತನಾಡಿ, ಚನ್ನವೀರ ಕಣವಿ ಉತ್ತರ ಕರ್ನಾಟಕದಲ್ಲಿ ಒಂದು ಕಾವ್ಯ ಪರಂಪರೆಯನ್ನೇ ಸೃಷ್ಟಿಸಿದರು. ಅನೇಕ ಯುವಕವಿಗಳಿಗೆ ಉತ್ತೇಜನ ನೀಡಿ ಅವರು ಕಾವ್ಯ ಬರೆಯುವಂತೆ, ಓದುವಂತೆ ಪ್ರೋತ್ಸಾಹಿಸಿದರು. ಯುವಕವಿಗಳು ಓದುವ ಕೋಣೆಯನ್ನು ಕಾವ್ಯಾನುಭವನ ಮಂಟಪವನ್ನಾಗಿ ರೂಪಿಸಬೇಕು. ಬೇಂದ್ರೆ ಶ್ರಾವಣದ ಕವಿ, ಕುವೆಂಪು ಸೂರ್ಯೋದಯದ ಕವಿ ಹಾಗೂ ಡಾ. ಚೆನ್ನವೀರ ಕಣವಿ ಮಳೆಗಾಲದ ಕವಿ ಎಂದು ಗುರುತಿಸಿಕೊಂಡಿದ್ದು ವಿಶೇಷ ಎಂದು ಹೇಳಿ, ಶಾಂತಾದೇವಿ ಕಣವಿಯವರೂ ಸಹ ಓರ್ವ ಶ್ರೇಷ್ಠ ಕಥೆಗಾರರಾಗಿದ್ದರು. 100ಕ್ಕೂ ಹೆಚ್ಚು ಕಥೆಗಳನ್ನು ಬರೆದಿರುವ ಅವರ ಕಥೆಗಳನ್ನು ಯುವಕವಿಗಳು ಓದಬೇಕೆಂದರು.
ಡಾ ಪ್ರಜ್ಞಾ ಮತ್ತಿಹಳ್ಳಿ ನಿರ್ಣಾಯಕರ ಪರವಾಗಿ ಮಾತನಾಡಿದರು. ಕ.ವಿ.ವ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಶಿವಾನಂದ ಕಣವಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಬ್ಯಾಡಗಿಯ ಕೆರವಡಿಯ ಮಧು ಕಾರಗಿ ಅವರ ‘ಮಿತಿ’ ಕಾವ್ಯ ಪ್ರಥಮ, ಬಂಟ್ವಾಳದ ಜಯಶ್ರೀ ಇಡ್ಕಿದು ಅವರ ‘ಅಮ್ಮ ಮತ್ತು ಚೂಡಿದಾರ’ ಕಾವ್ಯ ದ್ವಿತೀಯ ಹಾಗೂ ಮಾನ್ವಿಯ ಸಂಜೀವ ಜಗ್ಲಿಯ ‘ಸೂಳೆ ಯಾರು’ ಮತ್ತು ಶಿರಸಿಯ ಚಂದನ ಡಿ. ನಾಯ್ಕ ಅವರ ‘ಯಾಕಿಷ್ಟೊಂದು ನೆನಪಾಗುತ್ತಿಯೇ’ ಕಾವ್ಯಕ್ಕೆ ತೃತೀಯ ಬಹುಮಾನ ಪಡೆಕೊಂಡರು.
ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಸಾಗರದ ದಿವ್ಯಶ್ರೀ ಅದರಂತೆಯ ‘ಪುಟ್ಟಿ’ ಕಥೆ ಪ್ರಥಮ, ಬೆಳಗಾವಿಯ ರಂಜಿತಾ ವಿಕ್ರಮ ಮಹಾಜನ ‘ಭಿಕ್ಷೆ’ ಕಥೆ ದ್ವಿತೀಯ ಹಾಗೂ ಕಾರಟಗಿಯ ವಿದ್ಯಾಶ್ರೀ ಹಡಪದ ‘ಪಶ್ಚಾತಾಪ’ ಕಥೆ ಮತ್ತು ಸವಣೂರ ಕುರುಬರ ಮಲ್ಲೂರಿನ ಡಾ. ಕಾವ್ಯಾ ಕೆ.ಎಸ್. ‘ಬೆಂಕಿ ಹಿಂದಿನ ಆ ನೆರಳು...!’ ಕಥೆಗೆ ತೃತೀಯ ಬಹುಮಾನ ಪಡೆದುಕೊಂಡರು. ಎರಡು ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಮತ್ತು ಫಲಕದೊಂದಿಗೆ ಫಲಪುಷ್ಪ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಜಿನದತ್ತ ಹಡಗಲಿ, ಪ್ರಿಯದರ್ಶಿ ಕಣವಿ, ಚಂದ್ರಮೌಳಿ ಕಣವಿ, ಕರುಣಪ್ರಸಾದ ಕಣವಿ, ಡಾ. ಅಶೋಕ ಗೋಧಿ, ಡಾ. ರಂಜನಾ ಗೋಧಿ, ಡಾ. ವೀರಣ್ಣ ರಾಜೂರ, ಡಾ. ಕೆ.ಎಂ. ಗುಡಸಿ, ನಿಂಗಣ್ಣ ಕುಂಟಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸಿ.ಯು. ಬೆಳ್ಳಕ್ಕಿ, ಎ.ಎ. ದರ್ಗಾ, ವಿಜಯಕುಮಾರ ಗಿಡ್ನವರ ದಂಪತಿಗಳು, ಚಂದ್ರಶೇಖರ ಅಮೀನಗಡ ಸೇರಿದಂತೆ ಕಣವಿ ಅಭಿಮಾನಿಗಳು, ಪರಿವಾರದವರು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 