ಅಜ್ಜರಣಿಯಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜನ್ಮದಿನಾಚರಣೆ
ಬನವಾಸಿ 15: ಸಮೀಪದ ಅಜ್ಜರಣಿ ಗ್ರಾಮದಲ್ಲಿ ಜೈ ಭೀಮ್ ಯುವಕ ಸಂಘ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ 130ನೇ ಜನ್ಮದಿನಾಚರಣೆ ಹಾಗೂ ಭಾವಚಿತ್ರ ಮೆರವಣಿಗೆ ಬುಧವಾರ ಅದ್ದೂರಿಯಿಂದ ಜರುಗಿತು.
ಮುಂಜಾನೆ 10ಗಂಟೆಗೆ ಅಜ್ಜರಣಿಯ ರಂಗಮಂದಿರದಿಂದ ಅಲಂಕೃತ ವಾಹನದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸುವ ಮುಖಾಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯೂ ಅಜ್ಜರಣಿಯ ಪ್ರಮುಖ ಬೀದಿಯಲ್ಲಿ ಸಾಗುತ್ತ ಮತ್ತುಗುಣಿ ಗ್ರಾಮದಿಂದ ಬನವಾಸಿಗೆ ಆಗಮಿಸಿ ಅಲ್ಲಿನ ಪ್ರಮುಖ ರಸ್ತೆಯಲ್ಲಿ ಸಾಗಿ ಅಂಬೇಡ್ಕರ್ ಭವನದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಯುವಕರು ಜೈ ಭೀಮ್ ಬಾವುಟಗಳನ್ನು ಹಿಡಿದು ಅಂಬೇಡ್ಕರ್ ಜೀವನಾಧಾರಿತ ಗೀತೆಗೆ ಜಯಘೋಷವನ್ನು ಕೂಗುತ್ತ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. ಸುಡು ಬಿಸಿಲನ್ನು ಲೆಕ್ಕಿಸದೇ ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಗೆ ಚಾಲನೆ ನೀಡಿದ ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಮಾತನಾಡಿ, ಸಂವಿಧಾನ ಶಿಲ್ಪಿಯಾಗಿ ಮಹಿಳಾ ಶಿಕ್ಷಣದ ರೂವಾರಿಗಳಾಗಿ ಕಾನೂನಗಳ ಸಂರಕ್ಷಕರಾಗಿ ಭಾರತದೇಶವನ್ನು ಸಮೃದ್ಧ ಭಾರತವನ್ನಾಗಿ ಮಾಡುವಲ್ಲಿ ಬಾಬಾಸಾಹೇಬ ಅಂಬೇಡ್ಕರ್ರವರ ಪಾತ್ರ ಪ್ರಮುಖವಾಗಿದೆ. ಅಂಬೇಡ್ಕರ ಅವರು ಜ್ಞಾನದ ಶಿಖರವಾಗಿದ್ದು ಯುವ ಜನತೆಯು ಅವರ ಜೀವನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.