ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ
ಮುಂಡಗೋಡ 01: ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಇಂದೂರ ಕೊಪ್ಪ ಗ್ರಾಮದಲ್ಲಿ ಗುರುವಾರ ಸಂಬವಿಸಿದ್ದು, ಈ ಕುರಿತು ಮೃತ ಮಹಿಳೆ ಪತಿ ಹಾಗೂ ಅತ್ತೆಯ ಮೇಲೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಮಂಜುನಾಥ ಹೊಸೂರ(32) ಆತ್ಮಹತ್ಯೆಗೆ ಶರಣಾದ ಮಹಿಳೆ. ಮದುವೆಯಲ್ಲಿ ಯಾವುದೇ ರೀತಿ ವರದಕ್ಷಿಣೆ ನೀಡಿಲ್ಲ ಎಂಬುವುದು ಸೇರಿದಂತೆ ಸ್ವಾತಿಗೆ ಗಂಡು ಮಗು ಜನಿಸಿಲ್ಲ ಎಂಬ ವಿಷಯವನ್ನ ಮುಂದಿಟ್ಟುಕೊಂಡು ಮೃತ ಮಹಿಳೆಯ ಪತಿ ಮಂಜುನಾಥ ಹೊಸೂರ ಹಾಗೂ ಅತ್ತೆ ತಾಯವ್ವ ಹೊಸೂರ ಎಂಬುವವರು ನಿನ್ನಂತವರು ಜೀವಂತ ಇರುವುದಕ್ಕಿಂತ ಸಾಯುವುದು ಮೇಲು ಎಂದು ಪದೇ ಪದೇ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತಮ್ಮ ಪುತ್ರಿ ಸ್ವಾತಿ ಹೊಸೂರ ನೇಣಿಗೆ ಶರಣಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತಳ ತಾಯಿ ಮಲ್ಲವ್ವ ಮಲ್ಲೇಶಪ್ಪ ಕಬ್ಬೇರ ದೂರು ನೀಡಿದ್ದಾರೆ. ಮುಂಡಗೋಡ ಕ್ರೈಮ್ ವಿಭಾಗ ಪಿ.ಎಸ್.ಐ ಎನ್.ಡಿ ಜಕ್ಕಣ್ಣನವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.