ದಾನ ಧರ್ಮ ಸಮಾಜ ಸೇವೆ ನನ್ನ ಜನ್ಮ ಸಾರ್ಥಕ: ಯಲಿಗಾರ
ಲೋಕದರ್ಶನ ವರದಿ
ಶಿಗ್ಗಾವಿ 04: ಈ ಕೊರೊನಾ ಮಹಾಮಾರಿ ಉಳ್ಳವರಿಗೆ ದೊಡ್ಡ ಪಾಠವನ್ನೇ ಕಲೆಸಿದ್ದು, ನಾನೂ ಕೂಡಾ ಈ ಕೋವಿಡ್‌ಗೆ ತುತ್ತಾಗಿ ಸಾವಿನ ದವಡಿಯಿಂದ ಪಾರಾಗಿ ಬಂದು ಮನ ಪರಿವರ್ತನೆಯಿಂದ ದಾನ ಧರ್ಮ ಸಮಾಜ ಸೇವೆ ಮಾಡುವ ಮೂಲಕ ನನ್ನ ಜನ್ಮವನ್ನು ಸಾರ್ಥಕ ಪಡೆಸಿಕೊಳ್ಳುತ್ತಿದ್ದೇನೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯಿಂದ ಉಚಿತ ಬಸ್‌ಪಾಸ್ ವಿತರಿಸಿ ಮಾತನಾಡಿದ ಅವರು, ನಾನು ಕೋವಿಡ್‌ನಿಂದ ಬಳಲುತ್ತಿದ್ದಾಗ ಆರೈಕೆ ಮಾಡಿದ ವೈದ್ಯಾಧಿಕಾರಿ, ಶುಶ್ರುಕಿಯರು, ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಪ್ರಾರಂಭವಾದ ಈ ನನ್ನ ಸಮಾಜ ಸೇವೆ ನಿರಂತರವಾಗಿ ಮುಂದುವರೆದುಕೊಂಡು ಹೋಗುತ್ತಿದೆ. ಶುಕ್ರವಾರ ನಮ್ಮ ಸೇವಾ ಸಂಸ್ಥೆಯಿಂದ ಗಂಗೆಬಾವಿ ರೆಸಾರ್ಟನಲ್ಲಿ ಗೋಶಾಲೆ ಉದ್ಘಾಟನೆಗೊಂಡಿದ್ದು, ಬರುವ ದಿನಗಳಲ್ಲಿ ಈ ಭಾಗದ ರೈತರಿಗೆ ಗೋಶಾಲೆ ವರದಾನವಾಗಿ ಪರಿಣಮಿಸಲಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲೆ ಯಮುನಾ ಕೊಣೇಸರ ಮಾತನಾಡಿ, ಸ್ವಾರ್ಥತೆಯಿಂದ ಸಮಾಜ ಸೇವೆ ಮಾಡುವರ ಮಧ್ಯ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡುತ್ತಿರುವ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ರವರ ಸೇವೆ ಸ್ಮರಣೀಯ ಸೇವೆ ಗಳಲ್ಲೋಂದಾಗಿದೆ ಎಂದು ಹೇಳಿದರು.
ಪತ್ರಕರ್ತ ಬಸವರಾಜ ಕುರಗೋಡಿ ಮಾತನಾಡಿ, ಬಡ, ದಿನ ದಲಿತರ ಕಷ್ಟ, ಕಾರ್ಪಣಯಗಳಿಗೆ ಕಣ್ಣೋರಿಸುವ ಕಾಯಕ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯಿಂದ ನಡೆಯುತ್ತಲಿದೆ. ಈ ನಾಡಿನಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ, ಅವರೆಲ್ಲರೂ ತಮ್ಮ ಮಡದಿ, ಮಕ್ಕಳಿಗಾಗಿ ಶ್ರಮಿಸಿದರೆ ಶಶಿಧರ ಯಲಿಗಾರರವರು ಸಮಾಜದ ಮಕ್ಕಳೆಲ್ಲಾ ನಮ್ಮವರು ಎಂದು ತಿಳಿದು ಅವರ ಕಷ್ಟ ಕಾರ್ಪಣಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಶಿಗ್ಗಾವಿ ಹಾಗೂ ಸವಣೂರ ತಾಲೂಕಿನಾದ್ಯಂತ ಇರುವ ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲೂ ಇಗಾಗಲೇ 70ಲಕ್ಷ ರೂ. ಗಳನ್ನು ವ್ಯಯಿಸಿರುವುದಾಗಿ ತಿಳಿಸಿದರು. ಸಭೆಯಲ್ಲಿ ಕಾಲೇಜ್‌ವತಿಯಿಂದ ಶಶಿಧರ ಯಲಿಗಾರರವರನ್ನು ಸನ್ಮಾನಿಸಲಾಯಿತು.