ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿ: ಪಾಟೀಲ
ರಾಣೆಬೆನ್ನೂರ 25: ಎಲ್ಲ ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು, ಸರ್ವರೂ ರಕ್ತದಾನ ಮಾಡುವುದರ ಮೂಲಕ ಇನ್ನೊಂದು ಜೀವ ಉಳಿಯಲು ಸಹಕರಿಸಬೇಕು ಎಂದು ಸ್ಥಳೀಯ ನಾಗಶಾಂತಿ ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ ಹೇಳಿದರು.
ನಗರದಲ್ಲಿನ ಎಂ.ಕೆ. ಮೆಮೊರಿಯಲ್ ಹಾಗೂ ಕನಸಿನ ರಾಣೇಬೆನ್ನೂರ ತಂಡವು ಶಿವಾಜಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನದಿಂದ ಆಗುವ ಅನೇಕ ಪ್ರಯೋಜನಗಳ ಬಗೆಗೆ ಪಾಟೀಲರು ವಿವರಿಸಿದರು.
ಡಾ.ನಾರಾಯಣ ಪವಾರ ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಕ್ಯಾನ್ಸರ್ರೋಗ ಬಾರದಂತೆ ನಿಯಂತ್ರಿಸಬಹುದು ಹಾಗೂ ಮಾನಸಿಕ ನೆಮ್ಮದಿ ಲಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಇದೇ ಸಂದರ್ಭದಲ್ಲಿ 25 ಕ್ಕೂ ಹೆಚ್ಚು ಸಲ ರಕ್ತದಾನ ಮಾಡಿದ ಮಂಜುನಾಥ ವಡವಿ ಹಾಗೂ ಚಮನಸಾಬ್ ಮುದೇನೂರ್ ಅವರಿಗೆ ಏಖ ಹೀರೋ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕನಸಿನ ರಾಣೇಬೆನ್ನೂರು ತಂಡದ 35 ಸದಸ್ಯರು ರಕ್ತದಾನ ಮಾಡಿದರು. ನಾಗರಾಜ ಪವಾರ, ಯುವರಾಜ ಬಾರಾಟಕ್ಕೆ, ಕಾಶಿನಾಥ ಪವಾರ, ಬ್ಲಡ್ ಬ್ಯಾಂಕಿನ ಮುಖ್ಯಸ್ಥ ಶ್ರೀಧರ್.ಜಿ.ಎಸ್ ಮತ್ತು ತಂಡದ ಸದಸ್ಯರು ಮತ್ತಿತರರು ಇದ್ದರು.