ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷಿಸಬೇಡಿ : ನ್ಯಾಯಾಧೀಶ ಅಮೋಲ್ ಜೇ ಹಿರೆಕುಡಿ
ಬ್ಯಾಡಗಿ 04: ಪ್ರಸ್ತುತ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಅವರಿಗೆ ಆರ್ಥಿಕ ಭದ್ರತೆ ಹಾಗೂ ಸಾಮಾಜಿಕ ರಕ್ಷಣೆ ಒದಗಿಸುವತ್ತ ಗಮನ ನೀಡಬೇಕಿದೆ ಎಂದು ಪ್ರಧಾನ ತಾಲೂಕು ಸತ್ರ ನ್ಯಾಯಾಧೀಶ ಅಮೋಲ್ ಜೇ ಹಿರೆಕುಡಿ ಅಭಿಪ್ರಾಯಪಟ್ಟರು.ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ತಾಲೂಕು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ.ಕಂದಾಯ ಇಲಾಖೆ ಇವರುಗಳ ಸಹಯೋಗದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ನಡೆದ ಹಿರಿಯ ವಿಶ್ವ ನಾಗರಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಭಾಟಿಸಿ ಮಾತನಾಡಿದರು.
ಹಿರಿಯರು ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ: ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಹಿರಿಯ ನಾಗರಿಕರು ನೇರವಾಗಿ ಉಪ ವಿಭಾಗಾಧಿಕಾರಿಯವರಿಗೆ ದೂರು ನೀಡಬಹುದು. ನ್ಯಾಯಾಲಯಕ್ಕೆ ಹೋಗುವ ಅಗತ್ಯವಿರುವುದಿಲ್ಲ. ಉಪ ವಿಭಾಗಾಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಿ ಮಕ್ಕಳಿಂದ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶಿಸಲು ಅವಕಾಶವಿದೆ ಎಂದರು.ಕಾನೂನು ನೆರವು ಪಡೆಯಿರಿ: ಪೋಷಕರ ಹೆಸರಿನಲ್ಲಿದ್ದ ಮನೆ ಅಥವಾ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು, ಅಂತಹ ಮಕ್ಕಳು ಪೋಷಕರನ್ನು ಮನೆಯಿಂದ ಹೊರ ಹಾಕಿದ್ದರೆ, ಮಕ್ಕಳಿಂದ ಆಸ್ತಿಯನ್ನು ಮರಳಿ ಪೋಷಕರ ಹೆಸರಿಗೆ ನೀಡಲು ಅವಕಾಶವಿದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿರಿಯ ನಾಗರಿಕರು ಕಾನೂನಿನ ಅರಿವು ಮತ್ತು ನೆರವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ದೌರ್ಜನ್ಯಕ್ಕೆ ಕಡಿವಾಣ ಹಾಕಿ: ಹೆಚ್ಚುವರಿ ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಸುರೇಶ್ ವಗ್ಗನವರ್ ಮಾತನಾಡಿ, ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಶೇ.8.5 ರಷ್ಟು ಹಿರಿಯ ನಾಗರಿಕರನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಹಿರಿಯರು ಖನ್ನತೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.ತಾಲೂಕು ದಂಡಾಧಿಕಾರಿ ಫೀರೊಜ ಷಾ ಸೊಮನಕಟ್ಟಿ ಹಿರಿಯರ ಗೌರವಿಸಿ: ಸಂಸ್ಕೃತಿ- ಸಂಪ್ರದಾಯಗಳಿಗೆ ಹೆಚ್ಚು ಬೆಲೆ ಕೊಡುವ ನಮ್ಮ ದೇಶದಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಮನೋಭಾವ ತರವಲ್ಲ. ಅನುಭವವಿರುವ ಹಿರಿಯ ನಾಗರಿಕರ ಮಾರ್ಗದರ್ಶನ ನಮಗೆ ಬೇಕಾಗುತ್ತದೆ.
ಹೀಗಾಗಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. ವಕೀಲರಾದ ಸಿ ಸಿ ದಾನಣ್ಣನವರ ಹಿರಿಯ ನಾಗರಿಕ ಕಾಯಿದೆ ಕುರಿತು ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಫದ ಉಪಾಧ್ಯಕ್ಷ ಬಿ.ಜಿ.ಹೀರೆಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಾಯ್ ಟಿ ಪೂಜಾರ, ಎನ್ ಎಸ್ ಬಟ್ಟಲಕಟ್ಟಿ .ಕೆ ಆರ್ ಲಮಾಣಿ ಸಹಾಯಕ ಅಭಿಯೋಜಕರು. ಎಸ್ ಎಚ್ ಗುಂಡಪ್ಪನವರ್ ಭಾರತೀ ಎಸ್ ಕುಲಕರ್ಣಿ ಎಸ್ ಹೆಚ್ ಕಾಟೇನಹಳ್ಳಿ. ಹಾಗೂ ನ್ಯಾಯವಾದಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ನ್ಯಾಯಾಂಗ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.