ಯರಗಟ್ಟಿ

ಕುಷ್ಠ ರೋಗ ಭಯ ಬೇಡ, ಜಾಗ್ರತೆ ಇರಲಿ ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್‌. ಆರ್‌. ಗಂಜಿ ಕರೆ: ಕುಷ್ಠರೋಗ ಜಾಗೃತಿ ಕಾರ್ಯಕ್ರಮ

ಕುಷ್ಠ ರೋಗ ಭಯ ಬೇಡ, ಜಾಗ್ರತೆ ಇರಲಿ ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್‌. ಆರ್‌. ಗಂಜಿ ಕರೆ: ಕುಷ್ಠರೋಗ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ  

ಯರಗಟ್ಟಿ 05: ಸಾರ್ವಜನಿಕರಲ್ಲಿ ಕುಷ್ಠ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕುಷ್ಠರೋಗಕ್ಕೆ ಸಂಬಂಧಿಸಿದ ಕಳಂಕ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ಕರೆ ನೀಡಲು ಒಂದು ಅವಕಾಶವಾಗಿದೆ ಎಂದು ಕ್ಷೇತ್ರ  ಆರೋಗ್ಯ ಶಿಕ್ಷಣಾಧಿಕಾರಿ ಆಯ್‌. ಆರ್‌. ಗಂಜಿ ಹೇಳಿದರು. 

ಸ್ಥಳಿಯ ವಿಶ್ವ ಕರ್ಮ ಶಾಲೆಯಲ್ಲಿ ಏರಿ​‍್ಡಸಲಾಗಿದ್ದ ಕುಷ್ಠರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಭಾರತದಲ್ಲಿ ಮಹಾತ್ಮಾ ಗಾಂಧೀಜಿಯವರು ಕುಷ್ಠರೋಗದ ನಿರ್ಮೂಲನೆಗಾಗಿ, ರೋಗಿಗಳ ಪರವಾಗಿ ಹೋರಾಟ ನಡೆಸಿದ ಸಲುವಾಗಿ ಅವರ ಪುಣ್ಯತಿಥಿ ದಿನವಾದ ಜನವರಿ 30ರಂದು ಕುಷ್ಠರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಜ.30ರಿಂದ ಫೆ. 13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಆಚರಿಸಲಾಗುತ್ತಿದೆ. ಕುಷ್ಠರೋಗ ವಿರುದ್ಧ ಹೋರಾಡೋಣ ಕುಷ್ಠರೋಗ  ಇತಿಹಾಸ ವಾಗಲಿ  ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಆಚರಿಸಲಾಗುತ್ತಿದೆ.  

ಕುಷ್ಠ ರೋಗದ ಲಕ್ಷಣಗಳು: ಚರ್ಮದ ಮೇಲೆ ಮೂಡುವ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕುಷ್ಠ ರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. ದೇಹದ ಭಾಗಗಳಾದ ಕಾಲು, ಮುಖ, ಪೃಷ್ಠ, ಬೆನ್ನುಗಳಲ್ಲಿ ಈ ಮಚ್ಚೆಗಳು ಹೆಚ್ಚಾಗಿ ಕಂಡು ಬರುತ್ತವೆ. ಮುಖ್ಯವಾಗಿ ಈ ಕಲೆಗಳಲ್ಲಿ ಸ್ಪರ್ಶ ಜ್ಞಾನ ಇಲ್ಲದೇ ಇರುವುದರಿಂದ ಬಿಸಿ, ಸ್ಪರ್ಶ, ನೋವು, ತುರಿಕೆ ಗೊತ್ತಾಗುವುದಿಲ್ಲ. ಕುಷ್ಠರೋಗದಲ್ಲಿ ನರಗಳಿಗೂ ತೊಂದರೆ ಉಂಟಾಗುವುದರಿಂದ ವಸ್ತುಗಳನ್ನು ಹಿಡಿಯುವಾಗ ಕೈಯಲ್ಲಿ ದೌರ್ಬಲ್ಯ ಅಥವಾ ಅಸಮರ್ಥತೆ, ಬಲಹೀನತೆ. ಚರ್ಮದ ಮೇಲೆ ಗಂಟುಗಳು, ನಡೆದಾಡುವಾಗ ಕಾಲುಗಳು ಎಳೆಯುವ ಲಕ್ಷಣಗಳು ಕಂಡುಬರುತ್ತವೆ.ಕತ್ತಿನ ಪಕ್ಕದಲ್ಲಿ ಮೊಣಕೈ ಹಾಗೂ ಮೊಣಕಾಲಿನ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವು. ಕಣ್ಣಿನ ಹುಬ್ಬಿನ ಕೂದಲು ಉದುರುವುದು. ಕೈಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಿರುವ ಲಕ್ಷಣ ಕಂಡು ಬರುತ್ತವೆ. ಇವು ಕುಷ್ಠ ರೋಗದ ಲಕ್ಷಣಗಳಲ್ಲ. ರೋಗ ಹರಡುವ ವಿಧಾನ- ಕುಷ್ಠರೋಗವು ಸೋಂಕಿತ ಗಾಳಿಯ  ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 

 ಕುಷ್ಠ ರೋಗವು ಎಲ್ಲ ವಯಸ್ಸಿನವರಿಗೂ ಹರಡಬಹುದು. ಕುಷ್ಠ ರೋಗ ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಅಥವಾ ಚಿಕಿತ್ಸೆ ಪಡೆಯದೇ ರೋಗಾಣು ಹೊಂದಿರುವ ವ್ಯಕ್ತಿ ಕೆಮ್ಮಿದಾಗ ಆ ರೋಗಾಣುಗಳು ಆರೋಗ್ಯವಂತ ವ್ಯಕ್ತಿಗೆ ಹರಡಬಹುದು. 

ಕುಷ್ಠ ರೋಗದ ವರ್ಗೀಕರಣ- ಕುಷ್ಠ ರೋಗವನ್ನು ಮಚ್ಚೆಗಳ ಸಂಖ್ಯೆಯ ಆಧಾರದ ಮೇಲೆ ಪಾಸಿಬ್ಯಾಸಿಲರಿ ಹಾಗೂ ಮಲ್ಟಿ ಬ್ಯಾಸಿಲರಿ ಎಂದು ವರ್ಗೀಕರಿಸಲಾಗುತ್ತದೆ. ದೇಹದಲ್ಲಿ 1-5 ಮಚ್ಚೆಗಳಿದ್ದಲ್ಲಿ ಅದನ್ನು ಪಾಸಿಬ್ಯಾಸಿಲರಿ ಕುಷ್ಠ ರೋಗ ಎಂದು ಕರೆಯಲಾಗುತ್ತದೆ. ದೇಹದಲ್ಲಿ 6ಕ್ಕೂ ಹೆಚ್ಚು ಮಚ್ಚೆಗಳಿದ್ದಲ್ಲಿ ಅದನ್ನು ಮಲ್ಟಿಬ್ಯಾಸಿಲರಿ ಕುಷ್ಠ ರೋಗ ಎಂದು ಕರೆಯಲಾಗುತ್ತದೆ.  

ಕುಷ್ಠ ರೋಗವನ್ನು ಪತ್ತೆ ಹಚ್ಚುವ ವಿಧಾನ 

ಕುಷ್ಠ ರೋಗವನ್ನು ವೈದ್ಯಕೀಯ ರೋಗ ಲಕ್ಷಣಗಳಿಂದ ಗುರುತಿಸಿ ನಿರ್ಣಯಿಸಲಾಗುತ್ತದೆ. ರೋಗಿಯ ಚರ್ಮವನ್ನು ಹಗಲು ಬೆಳಕಿನಲ್ಲಿ ಅಥವಾ ಒಳ್ಳೆಯ ಪ್ರಕಾಶಮಾನ ಬೆಳಕು ಇರುವ ಕೊಠಡಿಯಲ್ಲಿ ಪರೀಕ್ಷಿಸಲಾಗುತ್ತದೆ. ಮಚ್ಚೆಗಳಲ್ಲಿನ ಸ್ಪರ್ಶ ಜ್ಞಾನ ಪರೀಕ್ಷಿಸಲಾಗುತ್ತದೆ. ಸ್ಪರ್ಶ ಜ್ಞಾನ ಇಲ್ಲದವರನ್ನು ಪರೀಕ್ಷಿಸಲು, ರೋಗಿಗೆ ಕಣ್ಣು ಮುಚ್ಚಲು ಹೇಳಿ ಪೆನ್ನಿನಂತಹ ಮೊನಚಾದ ವಸ್ತುವಿನ ಮೂಲಕ ಮಚ್ಚೆಯನ್ನು ಸ್ಪರ್ಶಿಸಿ ಪರೀಕ್ಷಿಸಲಾಗುತ್ತದೆ. ನರಗಳಲ್ಲಿ ಊತ ಉಂಟಾಗುವ ಸಾಧ್ಯತೆ ಇರುವುದರಿಂದ ನರಗಳ ಪರೀಕ್ಷೆಯನ್ನು ಮಾಡಲಾಗುತ್ತದೆ. ಕಣ್ಣು, ಮುಖ, ಕೈ ಕಾಲುಗಳಲ್ಲಿ ಎದ್ದು ಕಾಣುವಂತಹ ಊನಗಳು ಇವೆಯೇ ಎಂದು ಪರೀಕ್ಷಿಸಲಾಗುತ್ತದೆ. ಮಚ್ಚೆ ಇರುವಲ್ಲಿ ಯಾವುದೇ ರೀತಿಯ ಸ್ಪರ್ಶ ಜ್ಞಾನ ಇಲ್ಲದೇ ಇದ್ದಲ್ಲಿ ಅದು ಕುಷ್ಠ ರೋಗವಾಗಿರುವ ಸಾಧ್ಯತೆ ಇದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂದು ಕುಷ್ಠ ರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗಿದ್ದರೂ ಈ ರೋಗದ ಬಗ್ಗೆ ಇರುವ ಮಾಹಿತಿ ಕೊರತೆ, ಸೂಕ್ತವಾದ ಚಿಕಿತ್ಸೆ ಪಡೆಯದಿರುವುದು ಹಾಗೂ ಜನರಲ್ಲಿ ಈ ರೋಗದ ಬಗ್ಗೆ ಇರುವ ಕೆಲವು ಮೂಢನಂಬಿಕೆಗಳ ಕಾರಣ ದಿಂದಾಗಿ ಭಾರತದಲ್ಲಿ ಇನ್ನೂ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದು ಹೇಳಿದರು.  

ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಈರಗಾರ ಮಾತನಾಡಿ ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಇದು ನಿಧಾನವಾಗಿ ಹರಡುವ ಸೋಂಕು ರೋಗ. ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಈ ರೋಗದ ಪ್ರಾರಂಭದ ಹಂತದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ ರೋಗಾಣುಗಳು ದೇಹದಲ್ಲಿ ಅತೀ ಹೆಚ್ಚು ಉತ್ಪತ್ತಿಯಾದಂತೆ ವ್ಯಕ್ತಿಯ ಚರ್ಮ, ನರ, ಕೈಕಾಲು ಹಾಗೂ ಕಣ್ಣುಗಳಿಗೆ ಹಾನಿಯುಂಟು ಮಾಡುತ್ತವೆ. ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಸರಿಯಾಗಿ ಪಡೆದಲ್ಲಿ ಈ ರೋಗದಿಂದ ಮುಕ್ತವಾಗಬಹುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರಧಾನ ಗುರುಗಳು ಆರ್‌. ಎಸ್‌. ಕಲ್ಲಣ್ಣವರ, ಪಿ. ವಾಯ್‌. ಬಾಳೋಜಿ, ಸಂತೋಷ ತಳವಾರ, ಬಿ. ಎಸ್‌. ಗುಳಗಂದಿ,ಎ. ವ್ಹಿ. ವಿಭೂತಿ. ಬಿ.ಎಸ್‌.ಬೆಂಡಿಗೇರಿ ಎನ್‌.ಎಂ ಹಾರೂಗೊಪ್ಪ. ಶಾಲೆ ನಿರ್ದೇಶಕರಾದ ಸಚೀನ ಬಡಿಗೇರ ಸೆರಿದಂತೆ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರಾದ ಬಸಮ್ಮ ಮೂಲಿಮನಿ, ರೇಖಾ ಗಿರಿಯವ್ವಗೋಳ ಉಪಸ್ಥಿತರಿದ್ದರು. 


ಸುದ್ದಿ ಓದಿ