ವೈದ್ಯರು ಹೆಚ್ಚು ಬಡರೋಗಿಗಳತ್ತ ಗಮನ ಹರಿಸಬೇಕಿದೆ ಕ್ಯಾನ್ಸರ್ ತಜ್ಞ ಡಾ. ಶರದ ದೇಸಾಯಿ ಕರೆ
ಘಟಪ್ರಭಾ 03: ಸ್ಥಳಿಯ ಜೈಂಟ್ಸ್ ಗ್ರುಪ್ದ ವತಿಯಿಂದ ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆಯನ್ನು ಶನಿವಾರದಂದು ಸಂಜೆ ಮೃತ್ಯುಂಜಯ ಸಾಂಸ್ಕೃತಿಕ ಸಭಾ ಭವನದಲ್ಲಿ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಎಮ್.ಬಿ. ದೊಡಬಸನ್ನವರ ಮಾತನಾಡಿ ಜೈಂಟ್ಸ್ ಗ್ರುಪ್ ನಡೆದು ಬಂದ ದಾರಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ವಿವರಿಸಿದರು. ನಂತರ ಕ್ಯಾನ್ಸರ್ ತಜ್ಞ ಡಾ.ಶರದ ದೇಸಾಯಿ, ಡಾ. ಪ್ರವೀಣ ಹ್ಯಾಟಗೋಳ, ಡಾ. ವಿಜಯ ಬಡಕುಂದ್ರಿ, ಪತ್ರಕರ್ತ ರಮೇಶ ಜಿರಲಿಯವರನ್ನು ಗ್ರುಪ್ವತಿಯಿಂದ ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಕ್ಯಾನ್ಸರ್ ತಜ್ಞ ಡಾ. ಶರದ ದೇಸಾಯಿಯವರು ಬಡ ರೋಗಿಗಳನ್ನು ನಾವು ಹೆಚ್ಚು ಕಾಳಜಿ ವಹಿಸಿ ಚಿಕಿತ್ಸೆ ನೀಡಿದಲ್ಲಿ ನಮಗೆ ಗೌರವ ಹಾಗೂ ಪ್ರಚಾರ ತಾನಾಗಿಯೆ ಸಿಗುತ್ತದೆ. ಶ್ರೀಮಂತ ರೋಗಿಗಳು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡರೋಗಿಗಳಿಗೆ ಅದು ಸಾದ್ಯವಾಗುವದಿಲ್ಲ. ಅವರು ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ ವೈದ್ಯರನ್ನು ಸದಾ ಮನದಲ್ಲಿಟ್ಟಿರುತ್ತಾರೆ. ಅದರಲ್ಲಿ ಕ್ಯಾನ್ಸರ್ ರೋಗವು ಮಾರಣಾಂತಿಕ ರೋಗ. ಅದಕ್ಕಾಗಿ ವೈದ್ಯರು ಹೆಚ್ಚು ಬಡರೋಗಿಗಳತ್ತ ಗಮನ ಹರಿಸಬೇಕಾಗಿದೆ. ವೈದ್ಯರು ಹಾಗೂ ದಾದಿಯರು ತಮಗೆ ವಹಿಸಿಕೊಟ್ಟ ಕಾರ್ಯವನ್ನು ಶ್ರದ್ಧೆಯಿಂದ ಹಾಗು ಅಚ್ಚುಕಟ್ಟಾಗಿ ಮಾಡಿದ್ದಲ್ಲಿ ಆ ವೃತ್ತಿಯಲ್ಲಿ ನಿಜವಾಗಿಯೂ ಯಶಸ್ಸು ಕಾಣುತ್ತಾರೆ ಎಂದರು. ಒಂದು ಸಿಹಿ ಸುದ್ದಿ ನೀಡಿದ ಡಾ. ದೇಸಾಯಿಯವರು ಸದ್ಯದಲ್ಲಿಯೇ ಘಟಪ್ರಭಾ ಸಮೀಪ ಸಂಕೇಶ್ವರದಲ್ಲಿ ಬಡ ರೋಗಿಗಳಿಗಾಗಿ ಒಂದು ಕಾನ್ಸರ್ ಆಸ್ಪತ್ರೆ ಪ್ರಾರಂಬಿಸುತ್ತಿರುವದಾಗಿ ಸಭೆಗೆ ತಿಳಿಸಿದರು.
ಸತ್ಕಾರ ಸ್ವೀಕರಿಸಿ ಡಾ. ಪ್ರವೀಣ ಹ್ಯಾಟಗೋಳ, ಡಾ. ವಿಜಯ ಬಡಕುಂದ್ರಿ, ಜೈಂಟ್ಸ್ ಗ್ರುಪ್ ಅಧ್ಯಕ್ಷ ಸುರೇಶ ಕರೋಶಿ ಮಾತನಾಡಿದರು. ಡಾ.ವಿಲಾಸ ನಾಯಿಕವಾಡಿ ಸ್ವಾಗತಿಸಿದರು. ಉಮಾ ದೊಡ್ಡಮನಿ ನಿರೂಪಿಸಿದರು. ಶ್ರೀಕಾಂತ ಮಹಾಜನ ವಂದಿಸಿದರು. ಸಭೆಯಲ್ಲಿ ಘಟಪ್ರಭಾ ಜೈಂಟ್ಸ್ ಗ್ರುಪ್ ಸದಸ್ಯರು ಪತ್ರಕರ್ತರು ಇದ್ದರು