ಆಟೋ ಚಾಲಕರಿಗೆ ಅನವಶ್ಯಕ ತೊಂದರೆ ಕೊಡಬೇಡಿ: ಲಮಾಣಿ
ರಾಣೆಬೆನ್ನೂರು 12: ಆಟೋ ಚಾಲಕರೂ ಕೂಡ ಒಬ್ಬ ಸಮಾಜ ಸೇವಕರು. ರಾತ್ರಿಯಿಡೀ ಕೆಲಸ ಮಾಡುವ ಆಟೋ ಚಾಲಕರು ಮತ್ತು ಮಾಲಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಇವರುಗಳು ಸಂಚಾರಿ ನಿಯಮದ ಪ್ರಕಾರ ಲೈಸೆನ್ಸ್, ಇನ್ಸುರೆನ್ಸ, ಯುನಿಪಾರ್ಮ, ಪಾಸಿಂಗ್ ಸೇರಿದಂತೆ ಎಲ್ಲವನ್ನೂ ಪಾಲಿಸಿದಲ್ಲಿ ಆರಕ್ಷಕರೂ ನಿಮ್ಮ ಮೇಲೆ ಯಾವ ಕೇಸನ್ನೂ ಸಹ ದಾಖಲಿಸುವುದಿಲ್ಲ ಎಂದು ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಲಮಾಣಿಯವರು ಹೇಳಿದರು.
ಮೇಡ್ಲೇರಿ ರಸ್ತೆಯ ಗಂಗಾಜಲ ಶ್ರೀ ಚೌಡೇಶ್ವರಿ ದ್ವಾರ ಬಾಗಿಲು ಹತ್ತಿರ ನೂತನವಾಗಿ ಉದ್ಘಾಟನೆಗೊಂಡ ‘ಶ್ರೀ ಸ್ವಾಮಿ ವಿವೇಕಾನಂದ ಆಟೋ ನಿಲ್ದಾಣ’ಕ್ಕೆ ಚಾಲನೆ ನೀಡಿ ಮಾತನಾಡಿದರು. ನೂತನವಾಗಿ ಇಲ್ಲಿ ಆಟೋ ನಿಲ್ದಾಣ ಉದ್ಘಾಟನೆಯಾಗಿರುವುದರಿಂದ ಆಟೋ ನಿಲ್ಲಿಸಲಿಕ್ಕೆ ನಗರಸಭೆಗೆ ಸಂಬಂಧಿಸಿದ ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಪೌರಾಯುಕ್ತರು ಆಟೋ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕರೂ ಕೂಡ ಬಡವರಾಗಿರುವುದರಿಂದ ನಗರಸಭೆಯ ವತಿಯಿಂದ ಅವರಿಗೆ ನಿವೇಶನ ಕಲ್ಪಸಿ ಕೊಡಬೇಕೆಂದು ಒತ್ತಾಯಿಸಿದರು. ಪೊಲೀಸರೂ ಸಹ ಕಾನೂನು ಸುವ್ಯವಸ್ಥೆ ಕಾಪಾಡುವ ನಾಡಿನ ಯೋಧರು. ಯಾವುದೇ ಕಾರಣಕ್ಕೂ ಸಕಾರಣವಿಲ್ಲದೆ ಆಟೋ ಚಾಲಕ ಹಾಗೂ ಮಾಲಕರಿಗೆ ಯಾವುದೇ ತೊಂದರೆಯನ್ನು ಕೊಡಬಾರದೆಂದು ವಿನಂತಿಸಿಕೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ರಾಜನಹಳ್ಳಿ, ಮಂಜುಸ್ವಾಮಿ ಮನಿಮಠ, ಉಮೇಶ ತಿಳವಳ್ಳಿ, ರಮೇಶ ಚವ್ಹಾಣ, ನಾಗರಾಜ ಚವ್ಹಾಣ, ಆಟೋ ಚಾಲಕ ಹಾಗೂ ಮಾಲಕರುಗಳಾದ ವಿನಯ್ಶಂಕರ್ ಪೂಜಾರ, ಶಂಕರ್ ಡಂಬರಳ್ಳಿ, ನಾಗರಾಜ ಲಮಾಣಿ, ಪೀರೂ ಪೂಜಾರ, ನಾಗರಾಜ ಚವ್ಹಾಣ, ಶೇಖಪ್ಪ ಲಮಾಣಿ, ಲಕ್ಷ್ಮಣ ನಾಯಕ್, ಸುಭಾಸ ಛತ್ರದ, ರಾಜು ಸಿದ್ದಾಪುರ, ಸುರೇಶ್ ಮೆಡ್ಲೇರಿ, ಒಳಗೊಂಡಂತೆ ಮೊದಲಾದವರು ಇದ್ದರು.