ಬ್ಯಾಡ್ಗಿ

ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ" ಗ್ರಾಮವಾಸ್ತವ್ಯ ಕಾರ್ಯಕ್ರಮ

ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ" ಗ್ರಾಮವಾಸ್ತವ್ಯ ಕಾರ್ಯಕ್ರಮ

ಬ್ಯಾಡಗಿ: ನಮ್ಮ ಹೊಲಕ್ಕೆ ಹೋಗಾಕ ದಾರಿ ಮಾಡಿ ಕೊಡ್ರಿ.. ದಾರ್ರೀ....ಎಂದು ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರು ಬರೀ.. ದಾರಿಯ ಬಗ್ಗೆಯೇ ದೂರುಗಳ ಮಹಾಪೂರವನ್ನೇ ಹರಿಸುವ ಮೂಲಕ ತಾಲೂಕಿನ ಬೀರನಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 

ತಾಲೂಕಿನ ಕಾಗಿನೆಲೆಯ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಿರೇಅಣಜಿ ಗ್ರಾಪಂ ವ್ಯಾಪ್ತಿಯ ಬೀರನಕೊಪ್ಪ ಗ್ರಾಮದಲ್ಲಿ ನಡೆದ ಕಂದಾಯ ಇಲಾಖೆಯ "ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ" ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ ಎದುರು ತಮ್ಮ ಅಹವಾಲನ್ನು ತೋಡಿಕೊಂಡ ಗ್ರಾಮಸ್ಥರು ಹಲವಾರು ವರ್ಷಗಳಿಂದ ತಮ್ಮ ಹೊಲಗಳಿಗೆ ತೆರಳಲು, ಬೆಳೆದ ಬೆಳೆಗಳನ್ನು ತರಲು ಪದೇಪದೇ ಪರದಾಡುವಂತಾಗಿದೆ. ಪ್ರತಿಯೊಂದು ಜಮೀನಿಗೆ ಹೋಗುವ ದಾರಿ ಇದ್ದರೂ ಸಹ ಅದು ಕಾಣದಂತಾಗಿದ್ದು, ಹೊಲದ ದಾರಿಯನ್ನು ತೋರುವ ಮೂಲಕ ರೈತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.ರೈತರ ಈ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ ಎಸ್‌.ಎ.ಪ್ರಸಾದ್ ಅವರು ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಹೊಲಗಳಿಗೆ ಹೋಗುವ ದಾರಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಆದಷ್ಟು ಬೇಗನೆ ಕ್ರಮ ಕೈಗೊಂಡು ಹೊಲಗಳಿಗೆ ಹೋಗುವ ದಾರಿಯ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರಲ್ಲದೇ, ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸರ್ಕಾರ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನರೂ ಸಹ ವಿವಿಧ ಇಲಾಖೆಗಳಲ್ಲಿ ಆಗಬೇಕಾದ ತಮ್ಮ ಕೆಲಸಗಳ ಬಗ್ಗೆ ಅಹವಾಲು ಸಲ್ಲಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಈವರೆಗೂ ಪರಿಹಾರ ಸಿಗದ ಕುರಿತು, ಪೋಡಿ ಸಮಸ್ಯೆ, ವಸತಿ ಬಸ್ ವ್ಯವಸ್ಥೆ, ಸರ್ವೇ ಕಾರ್ಯ, ಈ ಸ್ವತ್ತು, ರಸ್ತೆಗಳ ಅವ್ಯವಸ್ಥೆ, ಕೆರೆಕಟ್ಟೆಗಳ ಸುಧಾರಣೆ, ಕೆರೆ ಒತ್ತುವರಿ ತೆರವು, ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆಯ ಕೊರತೆ, ವಿದ್ಯುತ್ ಸೌಲಭ್ಯ, ರೈತರಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಸೇರಿದಂತೆ ಸುಮಾರು 65ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿ, ಇದಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಯವರಿಗೆ ಕ್ರಮ ಕೈಗೊಳ್ಳುವಂತೆ ಅರ್ಜಿಗಳನ್ನು ನೀಡಲಾಯಿತು. ಸ್ಥಳದಲ್ಲಿಯೇ ಕೆಲವು ಇಲಾಖಾಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಪರಿಹಾರವನ್ನು ಒದಗಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಲ್ಲಿ ಪಿಂಚಣಿ ಮಾಶಾಸನ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಾ ಹುಲ್ಮನಿ, ಉಪಾಧ್ಯಕ್ಷೆ ನಾಗವ್ವ ಮಸಾಲಿ, ಸದಸ್ಯರಾದ ಬಸವರಾಜ ಕೋಣನವರ, ವಿವಿಧ ಇಲಾಖಾಧಿಕಾರಿಗಳಾದ ಸುರೇಶ ಬೇಡರ, ರಾಮು ಆರೇಣ್ಣನವರ, ಜೆ.ಶಾಂತಮಣಿ, ಅಶೋಕ ಕುರುಬರ, ಎಚ್‌.ಟಿ.ಲಮಾಣಿ, ಜರ್ಮಲಿ, ಎಂ.ಎ.ಅಗಸರ, ಎನ್‌.ಎಸ್‌.ಚೌಡಾಳ, ಆರಿ​‍್ಸ.ದ್ಯಾಮನಗೌಡ್ರ, ಪ್ರಭಾಕರ ದೊಡ್ಡಮನಿ, ಪಿಡಿಓ ಬಸವರಾಜಗೌಡ ಶಿಡ್ರಳ್ಳಿ, ಕಂದಾಯ ಇಲಾಖೆ ಮತ್ತು ಗ್ರಾಪಂ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮವಾಸ್ತವ್ಯದಲ್ಲಿ ರಸಮಂಜರಿ ಕಾರ್ಯಕ್ರಮ:ತಾಲೂಕಿನಲ್ಲಿ ​‍್ರ​‍್ರಥಮ ಬಾರಿಗೆ ಕಂದಾಯ ಇಲಾಖೆಯ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮಸ್ಥರ ಮನ ರಂಜಿಸಿದ ತಾಲೂಕಾ ಆಡಳಿತ ಪ್ರಶಂಸೆಗೆ ಪಾತ್ರವಾಯಿತು. ಇದರಲ್ಲಿ ತಹಶೀಲ್ದಾರ ಎಸ್‌.ಎ.ಪ್ರಸಾದ್, ಸಿಡಿಪಿಓ ಡಾ.ಪಾರ್ವತಮ್ಮ ಹುಂಡೆಕಾರ, ಶಿಕ್ಷಕ ವೃಂದ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ದೇಶಭಕ್ತಿ ಗೀತೆ, ಜಾನಪದ ಹಾಡು, ಚಿತ್ರಗೀತೆ ಮತ್ತು ಹಳ್ಳಿ ಸೊಬಗಿನ ಹಾಸ್ಯ ಚಟಾಕಿಗಳನ್ನು ಹೇಳುವ ಮೂಲಕ ಗ್ರಾಮಸ್ಥರ ಮನ ಗೆದ್ದರು. 


ಸುದ್ದಿ ಓದಿ