ಬಾಳೆ ಹಣ್ಣು- ಮೊಟ್ಟೆ ವಿತರಣೆ ಮಾಡಿರುವುದು ಶ್ಲಾಘನೀಯ
ಲೋಕದರ್ಶನ ವರದಿ
ರಾಣಿಬೆನ್ನೂರ 31: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಕ್ಕಳ ಹಿತ ದೃಷ್ಟಿಯಿಂದ ಅಪೌಷ್ಠಿಕತೆ ಹೋಗಲಾಡಿಸಲು ಬಾಳೆ ಹಣ್ಣು ಮತ್ತು ಮೊಟ್ಟೆ ವಿತರಣೆ ಮಾಡಿರುವುದು ನಿಜಕ್ಕೂ ಶ್ಲ್ಯಾಘನೀಯವಾಗಿದೆ. ಇದರ ಸದುಪಯೋಗವನ್ನು ಮಕ್ಕಳ ಪಡೆದುಕೊಂಡು ಆರೋಗ್ಯವಂತರಾಗಿರಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಹೇಳಿದರು.
ಶುಕ್ರವಾರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸಿ ಮಾತನಾಡಿದ ಅವರು, ಈ ಮಹತ್ವಕಾಂಕ್ಷಿ ಯೋಜನೆಯು ಮಕ್ಕಳಿಗೆ ಅತ್ಯುತ್ತಮವಾಗಿ ಉಪಯೋಗವಾಗಲಿದೆ ಎಂದರು.
ಶಿಕ್ಷಣ ಪ್ರೇಮಿ ಅಪ್ಪಾಜಿ ಒಡೆಯರ ಮಾತನಾಡಿ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಅವರ ಆರೋಗ್ಯದ ಕಾಳಜಿಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಲೇ ಇವೆ. ಅವುಗಳ ಸದುಪಯೋಗವನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿಸುವುದರ ಮೂಲಕ ಸಮಾಜದಲ್ಲಿ ಆದರ್ಶರಾದಾಗ ಮಾತ್ರ ಇಂತಹ ಯೋಜನೆಗಳು ಜಾರಿಯಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ಮೈಲಾರೆಪ್ಪ ಬನ್ನಿಮಟ್ಟಿ, ಸದಸ್ಯರುಗಳಾದ ಶಂಭುಲಿಂಗಪ್ಪ ಚಕ್ರಸಾಲಿ, ಗಂಗಾಧರಯ್ಯ ಪೂಜಾರ, ನೇತ್ರಾವತಿ ಹಾವನೂರ ಶಾಲಾ ಮುಖ್ಯೋಪಾಧ್ಯಾಯರುಗಳಾದ ಐ.ಎಚ್.ಮೈದೂರ, ವಿಜಯ ಪೂಜಾರ ಸೇರಿದಂತೆ ಶಾಲಾ ಸಿಬ್ಬಂಧಿವರ್ಗ ಮತ್ತು ಮಕ್ಕಳು ಇದ್ದರು.