ವಿಜಯಪುರ

14 ತಿಂಗಳಿನಿಂದ ವೇತನ ನೀಡದ ಅಧಿಕಾರಿಗಳ ವಿರುದ್ಧ ಅಂಗವಿಕಲ ನೌಕರನ ಧರಣಿ

14 ತಿಂಗಳಿನಿಂದ ವೇತನ ನೀಡದ ಅಧಿಕಾರಿಗಳ ವಿರುದ್ಧ ಅಂಗವಿಕಲ ನೌಕರನ ಧರಣಿ


              ವಿಜಯಪುರ 24:  ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮುರುಗೇಂದ್ರ ಮಡಿವಾಳಪ್ಪ ಹುಣಶ್ಯಾಳ ಅವರಿಗೆ ಕಳೆದ ಸುಮಾರು 14 ತಿಂಗಳಿನಿಂದ ವೇತನ ನೀಡದ ಹಿನ್ನೆಲೆಯಲ್ಲಿ, ಸೋಮವಾರದಿಂದ (ನ. 23) ಕುಟುಂಬ ಸಮೇತರಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. 

               ಅಂಗವಿಕಲರಾಗಿರುವ ತಮಗೆ ಕಳೆದ 14 ತಿಂಗಳಿನಿಂದ ವೇತನ ನೀಡದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಮಾಡುವುದು ಅತ್ಯಂತ ಕಷ್ಟಕರವಾಗಿದೆ ಎಂದು ಮುರುಗೇಂದ್ರ ಹುಣಶ್ಯಾಳ ಅಳಲು ತೋಡಿಕೊಂಡಿದ್ದಾರೆ. 

             ಈ ಕುರಿತು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮಾನ್ಯ ಉಪ ಕಾರ್ಯದರ್ಶಿಗಳು ವೇತನ ಪಾವತಿಸುವಂತೆ ಸೂಚನೆ ನೀಡಿದ್ದರೂ, ಹಂದಿಗನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೇತನ ಪಾವತಿಸಲು ಮುಂದಾಗುತ್ತಿಲ್ಲ. ಸರ್ಕಾರದಿಂದ ವೇತನ ಪಾವತಿಗೆ ಅನುದಾನ ಬಿಡುಗಡೆಯಾದರೂ ತಮ್ಮ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

              ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದ ಅವರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ವಿಜಯಪುರ ಜಿಲ್ಲಾ ಸಮಿತಿಯ ಬೆಂಬಲದೊಂದಿಗೆ ಕುಟುಂಬ ಸಮೇತರಾಗಿ ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. 

              ಬಾಕಿ ವೇತನವನ್ನು ಕೂಡಲೇ ಪಾವತಿಸಿ, ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವ ಅಂಗವಿಕಲ ನೌಕರನಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

               ಧರಣಿ ಸ್ಥಳಕ್ಕೆ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಕಾಂ. ಸುರೇಖಾ ರಜಪೂತ ಹಾಗೂ ಸಿಐಟಿಯು ಮುಖಂಡರಾದ ಕಾಂ. ಲಕ್ಷ್ಮಣ ಹಂದ್ರಾಳ, ಗ್ರಾಪಂ ನೌಕರರ ಸಂಘ ಸಿಂದಗಿ ತಾಲೂಕ ಸಮಿತಿ ಅಧ್ಯಕ್ಷ ಎಂ.ಎಸ್‌.ಕೊಂಡಗೂಳಿ, ತಾಲೂಕ ಕಾರ್ಯದರ್ಶಿ ಬಮ್ಮು ಸುರಪುರ ಅವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 


ಸುದ್ದಿ ಓದಿ