ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರ ಮಿತ್ರನಾಗಿ ಕಾರ್ಯ
ಬನವಾಸಿ 15: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆಯು ಈ ಭಾಗದ ರೈತರ ಮಿತ್ರನಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಯೋಜನೆಗಳನ್ನು ಕೃಷಿ ಯಂತ್ರಧಾರೆಯ ಮುಖಾಂತರ ನೀಡಿ ರೈತರ ಕೃಷಿ ಬಂಡವಾಳದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವಂತೆ ಮಾಡುತ್ತಿದೆ.
ಹಿಂದಿನ ಕಾಲದಲ್ಲಿ ಕೃಷಿಗಾಗಿ ರೈತರು ಎತ್ತು, ಕೋಣಗಳ ಮೇಲೆ ಅವಲಂಭಿತರಾಗಿದ್ದರು. ಈ ಪಶುಗಳನ್ನು ಸಹಾ ಅವರ ಕುಟುಂಬ ಸದಸ್ಯರಂತೆ ಕಾಣುತ್ತಿದ್ದರು. ಬದಲಾದ ಕಾಲಚಕ್ರದಲ್ಲಿ ರೈತರಿಗೆ ಪಶು ಪೋಷಣೆ ಕಷ್ಟವಾಗುತ್ತಾ ಬಂತು. ಹಳ್ಳಿಗಳಲ್ಲಿ ಕೂಲಿ ಆಳುಗಳು ಸಿಗದೇ ಹೋದರು. ಅಲ್ಲದೇ ಪ್ರಕೃತಿ ವೈಪರೀತ್ಯಗಳ ನಡುವೆ ಕೃಷಿಯೂ ರೈತರಿಗೆ ಕಷ್ಟವಾಗುತ್ತಾ ಬಂತು. ಕೃಷಿಗಾಗಿ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಬೇಕಾಗಿ ಬಂತು. ಭೂಮಿಯ ಉಳುಮೆ, ಬಿತ್ತನೆ ಬೀಜ, ರಸ ಗೊಬ್ಬರ, ಕೂಲಿ ಕಾರ್ಮಿಕರು, ಕೀಟನಾಶಕ ಓಷಧಿಗಳು ದುಬಾರಿ ಅನಿಸತೊಡಗಿತು. ಅಲ್ಲದೇ ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಕ್ಕದಿರುವುದರಿಂದ ರೈತ ಬೇಸಾಯದಲ್ಲಿ ನಷ್ಟ ಅನುಭವಿಸತೊಡಗಿದ ಆದರೂ ಛಲ ಬಿಡದೇ ಹೆಚ್ಚು ಇಳುವರಿಯನ್ನು ಸಾಧಿಸಲು ಮುಂದಾಗುತ್ತಿದ್ದಾರೆ. ರೈತರಿಗೆ ನೆರವಾಗಲೇಬೇಕೆಂಬ ಉದ್ದೇಶದಿಂದ ಸರ್ಕಾರ ಕೃಷಿ ಯಂತ್ರಧಾರೆಯನ್ನು ಪ್ರಾರಂಭಿಸಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನೀಡಿ ಅನ್ನದಾತರ ಬಂಡವಾಳದ ಹೊರೆ ಕಡಿಮೆ ಮಾಡಿಕೊಳ್ಳಲು ಸಹಕಾರಿ ಮಾಡಿದೆ.
ರೈತರಿಗೆ ಅನುಕೂಲವಾಗಲೆಂದು ಟ್ರಾಕ್ಟರ್, ಕಲ್ಟಿವೇಟರ್, ಟಿಲ್ಲರ್, ಮಿನಿ ಟ್ರಾಕ್ಟರ್, ನಾಟಿ ಯಂತ್ರ, ಕಟಾವು ಯಂತ್ರ ಇನ್ನೂ ಅನೇಕ ತರದ ಕೃಷಿ ಯಂತ್ರಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪಡೆದು ಬನವಾಸಿಯಲ್ಲಿರುವ ಕೃಷಿಯಂತ್ರಧಾರೆಯ ಕೇಂದ್ರದಲ್ಲಿ ರೈತರಿಗೆ ಕೈಗೆಟಕುವ ದರದಲ್ಲಿ ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ಕೃಷಿ ಯಂತ್ರಧಾರೆ ಯೋಜನೆ ರೈತರಿಗೆ ಸೇವೆ ಸಲ್ಲಿಸುತ್ತಿದ್ದು ಈ ಯೋಜನೆಯಿಂದ ಅನೇಕ ರೈತರು ಲಾಭ ಪಡೆದಿದ್ದಾರೆ. ಇನ್ನು ಹೆಚ್ಚಿನ ರೈತರು ಯೋಜನೆಯ ಸದುಪಯೋಗ ಪಡೆಯಲಿ ಎಂಬುವುದು ಗ್ರಾಮಾಭಿವೃದ್ಧಿ ಯೋಜನೆಯ ಆಶಯವಾಗಿದೆ.
ಸಣ್ಣ ರೈತರಿಗೆ ಕಡಿಮೆ ಖರ್ಚಿನಲ್ಲಿ ಕೃಷಿ ಚಟುವಟಿಕೆ ಮಾಡಲು ಈ ಕೃಷಿ ಯಂತ್ರಧಾರೆ ಯೋಜನೆ ಉಪಯುಕ್ತವಾಗಿದೆ. ಕೃಷಿಗಾಗಿ ಮಾಡುವ ಬಂಡವಾಳದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಈ ಯೋಜನೆ ರೈತರಿಗೆ ಸಹಕಾರಿಯಾಗಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸಿ ವಸಂತ
ಕೃಷಿ ಯಂತ್ರಧಾರೆಯ ಪ್ರಭಂದಕರು ಬನವಾಸಿ.
ಕೃಷಿ ಯಂತ್ರಧಾರೆಯಿಂದ ಸಣ್ಣ ಸಣ್ಣ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ರೈತರು ಇದರ ಲಾಭ ಪಡೆದುಕೊಂಡಲ್ಲಿ ಸಂಸ್ಥೆಯ ಯಶಸ್ವಿಯ ಜೊತೆಗೆ ನಮ್ಮ ಏಳ್ಗೆಗೂ ಕಾರಣವಾಗುತ್ತದೆ.
ಶಿವಕುಮಾರ ಆರೇರ
ಪ್ರಗತಿಪರ ರೈತ, ಬನವಾಸಿ