ಧಾರವಾಡದಾಗೊಂದು ಲವ್ ಸ್ಟೋರಿ: 19ರಿಂದ ಸಿರಿಕನ್ನಡ ಚಾನೆಲ್ದಲ್ಲಿ ಪ್ರಸಾರ
ಧಾರವಾಡ 16: ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶನ ಮಾಡುವ ಮೂಲಕ ಹೆಸರಾದ ಹುಬ್ಬಳ್ಳಿಯ ಪೃಥ್ವಿರಾಜ್ ಕುಲಕರ್ಣಿ ಅವರು ಇದೀಗ ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ ಕಥೆಯಾಧಾರಿತ ಧಾರಾವಾಹಿ “ಧಾರವಾಡದಾಗೊಂದು ಲವ್ ಸ್ಟೋರಿ” ಇದೇ ತಿಂಗಳು 19ರಿಂದ ಸಿರಿಕನ್ನಡ ಚಾನೆಲ್ ದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಪ್ರಸಾರವಾಗಲಿದೆ.
ಕಿರುತೆರೆಯಲ್ಲಿ ಪಾರ್ವತಿ ಪರಮೇಶ್ವರ, ಶ್ರೀಮಾನ್ ಪಂಚರಂಗಿ ಪೋಂ ಪೋಂ, ಪರಿಣಿತಾ, ಕಣ್ಮಣಿ, ಸಿಲ್ಲಿಲಲ್ಲಿ, ಪಾತುಸಾತು,ಪಾಯಿಂಟ್ ಪರಿಮಳ, ಮೊದಲಾದ ಧಾರಾವಾಹಿಗಳ ಮೂಲಕ ಮನೆಮನೆಯವರ ಮನ ಗೆದ್ದಿರುವ ಕುಲಕರ್ಣಿಯವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಲಾವಿದರನ್ನು ಒಟ್ಟುಗೂಡಿಸಿದ್ದು 65 ಕಂತುಗಳ ಮೂಲಕ ಮತ್ತೆ ಉತ್ತರ ಕರ್ನಾಟಕದ ಭಾಷೆಯನ್ನು ಕರ್ನಾಟಕದಾಧ್ಯಂತ ವೀಕ್ಷಕರಿಗೆ ತಲುಪಿಸಲಿದ್ದಾರೆ.
ಮದುವೆಯಾದ ದಿನವೇ ಹಾವು ಕಚ್ಚಿ ಗಂಡ ಮೃತಪಟ್ಟು ವಿಧವೆಯಾದವಳ ಮನದಲ್ಲಿನ ತಳಮಳ, ಕುಟುಂಬದಲ್ಲಿನ ಹೊಯ್ದಾಟ, ಒಂದಿಷ್ಟು ಸಿಟ್ಟು ಸೇಡುಗಳ ಸಮ್ಮಿಲನ ಇದರಲ್ಲಿದ್ದು ತುಂಬು ಕುಟುಂಬದಲ್ಲಿನ ಅನೇಕ ಕಟ್ಟುಪಾಡುಗಳ ನಡುವೆ ನವಿರಾದ ಪ್ರೇಮದ ಎಳೇ ಇರಿಸಿ ಕಥೆ ರಚಿಸಲಾಗಿದ್ದು ತ್ರಿಕೋನ ಪ್ರೇಮಕಥೆ ಕುತೂಹಲ ಹುಟ್ಟಿಸುತ್ತದೆ. ಕೊನೆಗೆ ಯಾರ ಜೊತೆ ಮದುವೆ ಆಗುತ್ತದೆ ಎಂಬುದು ಧಾರಾವಾಹಿಯಲ್ಲಿ ನೋಡಬೇಕು . ಹುಬ್ಬಳ್ಳಿ, ಧಾರವಾಡ, ಕಾಮಧೇನು ಗ್ರಾಮ, ಇಟಿಗಟ್ಟಿ, ಗ್ರಾಮದ ದೇಸಾಯರ ವಾಡೆ, ಬೂದನಗುಡ್ಡ, ನೃಪತುಂಗಬೆಟ್ಟ, ಸಿದ್ಧಾರೂಢಮಠ, ಮೂರುಸಾವಿರಮಠ,ಹೀಗೆ ಹುಬ್ಬಳ್ಳಿ ಧಾರವಾಡದ ಸುತ್ತಮುತ್ತಲೇ 35 ಕಂತುಗಳು ಚಿತ್ರೀಕರಣ ಮುಗಿಸಲಾಗಿದ್ದು ಇನ್ನು 30 ಕಂತುಗಳ ಚಿತ್ರೀಕರಣ ಮೇ 1 ರಿಂದ ಆರಂಭವಾಗಲಿದೆ ಎಂದು ನಿರ್ದೇಶಕ ಪೃಥ್ವಿರಾಜ ಕುಲಕರ್ಣಿ ಹುಬ್ಬಳ್ಳಿಯ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಧಾರಾವಾಹಿಯಲ್ಲಿ ನಾಯಕ ವಿನಯ್, ನಾಯಕಿ ರೇಷ್ಮಾ ಮತ್ತು ಹರ್ಷಿತ, ಪೋಷಕ ಪಾತ್ರದಲ್ಲಿ ಸುನಿಲ್ ಪತ್ರಿ, ಶುಭ ಕೊಪ್ಪ, ವಿಕ್ರಂ ಕುಮುಟ, ಪ್ರಿಯಾ ಕುಲಕರ್ಣಿ, ಸಂತೋಷ ಬೆಂಗೇರಿ, ನಂದಿನಿ ಹರೀಶ್, ರಾಜ್ ನೀನಾಸಂ, ಗಿರಿಜಾ ಹಿರೇಮಠ, ವೀರೇಶ್ , ಪ್ರಥಾ ವಿಭೂತಿ, ವಿಶಾಲ್ ಸಾಲಿಮಠ, ಗಿರಿಜಾ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಕಥೆ-ಚಿತ್ರಕಥೆ ಜೊತೆಗೆ ನಿರ್ದೇಶನ ಪೃಥ್ವಿರಾಜ್ ಮ ಕುಲಕರ್ಣಿ, ಛಾಯಾಗ್ರಹಣ ಶಿವು, ಸಂಭಾಷಣೆ ಜೀ.ವಿ.ಹಿರೇಮಠ ಮತ್ತು ದಕ್ಷಿಣಾಮೂರ್ತಿ, ಪ್ರಸಾದನ ಶ್ರೀಕಾಂತ್ ಕುಲಕರ್ಣಿ, ಧ್ವನಿಗ್ರಹಣ ಕುಮಾರ್ ಪಂಚರಂಗಿ, ಮೇಲ್ವಿಚಾರಣೆ ರಾಜಲಕ್ಷ್ಮೀ ಕುಲಕರ್ಣಿ, ಸಹ ನಿರ್ದೇಶನ ಹೇಮಂತಕುಮಾರ್,ಸಹಾಯಕ ನಿರ್ದೇಶನ ಆದರ್ಶ, ಸಂಕಲನ ಇಮ್ರಾನ್ ಖಾನ್, ಸಹಾಯ ಪರಮ್, ತಾಂತ್ರಿಕ ಸಹಾಯ ಕೃಷ್ಣ ಪಂತ್, ರಾಘವೇಂದ್ರ ಪಂತ್ , ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ನಿರ್ಮಾಪಕರು ಗಾನಶ್ರೀ ಕೋಟ್ಯಾನ್ ಆಗಿದ್ದಾರೆ. ಈ ಧಾರಾವಾಹಿಗೆ ಇಟಿಗಟ್ಟಿ ದೇಸಾಯಿ ಮತ್ತು ಕುಟುಂಬ, ಮಾಲ್ತೇಶ್ ,ಮಮತಾ, ಅಶ್ವಿನಿ, ಪಿಜಿ, ಮತ್ತು ನಾಗೇಂದ್ರ ಲಂಗೋಟಿ ಮಿಶ್ರಕೋಟಿ ಅವರು ಸಹಕಾರ ನೀಡಿದ್ದಾರೆಂದು ನಿರ್ದೇಶಕ ಕುಲಕರ್ಣಿ ತಿಳಿಸಿದರು.