ಎರಡನೇ ದಿನಕ್ಕೆ ಧರಣಿ ಸತ್ಯಾಗ್ರಹ
ತಾಳಿಕೋಟೆ12: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಮಹಾರಾಣಾ ಪ್ರತಾಪ್ ವೃತ್ತದಲ್ಲಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೈಕೊಂಡಿರುವ ಧರಣಿ ಸತ್ಯಾಗ್ರಹ ಎರಡನೇ ದಿನ ಪೂರ್ಣಗೊಳಿಸಿದೆ.
ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗುತ್ತಿರುವ ಮೇಲ್ಸೇತುವೆಯ ರಸ್ತೆ ಕಾಮಗಾರಿ ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಿಸಬೇಕು. ಪುರಸಭೆಯಲ್ಲಿ ನಡೆದ ಅವ್ಯವಹಾರಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಸೋಮವಾರ ಆರಂಭಿಸಲಾಗಿತ್ತು. ಎರಡನೆ ದಿನವೂ ಸಹ ಧರಣಿ ಸತ್ಯಾಗ್ರಹ ಮುಂದುವರೆಯಿತು. ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಕೆಆರ್ಡಿಸಿಆಯ್ಎಲ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ, ಸಿಪಿಆಯ್ ಆನಂದ ವಾಗ್ಮೋಡೆ ಆಗಮಿಸಿ ಧರಣಿ ನಿರತರ ಆಹವಾಲನ್ನು ಆಲಿಸಿದರು. ಮನವಿಗಳ ಕುರಿತು ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ ಸಮಗ್ರವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್ಡಿಸಿಆಯ್ಎಲ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ, ಡೋಣಿ ಸೇತುವೆ ರಸ್ತೆ ಕಾಮಗಾರಿ ನೇರವಾಗಿ ಮಾಡಲು ಅನುಮೋದನೆಯಾಗಿಲ್ಲ. ನೇರವಾಗಿ ಮಾಡಲು ಹೋದರೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ಆಸ್ತಿ ಇದೆ. ಅದಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಪಕ್ಕದಲ್ಲಿಯೇ ರಸ್ತೆ ಹಾಗೂ ಪುರಸಭೆ ಜಾಗವಿದ್ದು ಅದಕ್ಕೆ ಯಾವುದೇ ಪರಿಹಾರ ಕೊಡುವ ಅವಶ್ಯಕತೆ ಇಲ್ಲ. ಹಿಗಾಗಿ ಸರಕಾರದಿಂದ ಅನುಮೋದನೆಯಾದ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವದು ಎಂದರು. ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಸಮಗ್ರ ತನಿಖೆಯನ್ನು ನಡೆಸೋಣ, ತಪ್ಪಿತಸ್ಥರ ವಿರುದ್ದ ಕ್ರಮ ಕೈಕೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸೋಣ, ಆದ ತಪ್ಪುಗಳನ್ನು ಸರಿಪಡಿಸೋಣ ಎಂದರು.
ಪುರಸಭೆಯಲ್ಲಿ ಆದ ಅವ್ಯವಹಾರಗಳ ಸಮಗ್ರ ತನಿಖೆಯಾಗಬೇಕು. ಖಾಸಗಿ ವ್ಯಕ್ತಿಗಳಿಗೆ ಹೋದ ಆಸ್ತಿಗಳನ್ನು ಮರಳಿ ಪಡೆಯುವವರೆಗೂ ಧರಣಿ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮರಳಿ ಹೋದ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷ ಸುಭಾಸ ಗೌಡಗೇರಿ, ಕಾರ್ಯದರ್ಶಿ ರವಿ ಕಟ್ಟಿಮನಿ, ಖಜಾಂಚಿ ಸುರೇಶ ಹಜೇರಿ, ಸುರೇಶ ಅಮರಸಿಂಗ ಹಜೇರಿ ನದೀಂ ಕಡು, ಪುರಸಭೆ ಮಾಜಿ ಅದ್ಯಕ್ಷೆ ನೀಲಮ್ಮಾ ಪಾಟೀಲ, ನ್ಯಾಯವಾದಿ ಎಂ.ಕೆ.ಕೆಂಬಾವಿ, ಚಂದ್ರು ಮಠಪತಿ, ರಾಮನಗೌಡ ದೇಸಾಯಿ, ಬಾಬುಸಾಬ ವಠಾರ ಸೇರಿದಂತೆ ಇತರರಿದ್ದರು.