ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ
ಗ್ರಾಪಂ ಅಧ್ಯಕ್ಷೆ ಕಲ್ಪನಾ ಮಳ್ಳಳ್ಳಿ ಅಭಿಪ್ರಾಯ: ಯಲ್ಲಾಪುರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ, ಬರಗಾಲ ತಡೆಯುವಿಕೆ ಕಾರ್ಯಕ್ರಮ
ರಾಣೇಬೆನ್ನೂರು 04: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಸೇವಾ ಸಂಸ್ಥೆಗಳು ಸರ್ಕಾರದ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಪಂ ಅಧ್ಯಕ್ಷೆ ಕಲ್ಪನಾ ರವಿ ಮಳ್ಳಳ್ಳಿ ಹೇಳಿದರು.
ತಾಲೂಕಿನ ಯಲ್ಲಾಪುರ ಗ್ರಾಮದ ಆಂಜನೇಯ ದೇವಸ್ಥಾನ ಸಭಾಂಗಣದಲ್ಲಿ ಕೃಷಿ ಇಲಾಖೆ ಮತ್ತು (ನೀಡ್ಸ್) ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ ಸಹಯೋಗದಲ್ಲಿ ಇತ್ತೀಚಿಗೆ ನಡೆದ ಜಲಾನಯನ ಅಭಿವೃದ್ಧಿ ಮತ್ತು ಬರಗಾಲ ತಡೆಯುವಿಕೆ ಡಿಪಿಆರ್ಎ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಣ್ಣು ಮತ್ತು ನೀರು ಬಹು ಮಹತ್ವದ ಪಾತ್ರ ವಹಿಸುತ್ತದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದರ ಮೂಲಕ ಗ್ರಾಮೀಣ ನಾಗರೀಕರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ನೀಡ್ಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಫ್.ಅಕ್ಕಿ ಪ್ರಾಸ್ತಾವಿಕ ಮಾತನಾಡಿ, ಈ ಯೋಜನೆ ರೈತರಿಗೆ ತುಂಬಾ ಅನುಕೂಲಕರವಾಗಲಿದೆ. ರೈತರ ಜಮೀನುಗಳಲ್ಲಿ ಇಳಿಜಾರಿಗೆ ಬದಲಾಗಿ ಅಡ್ಡಲಾಗಿ ಬದು ನಿರ್ಮಾಣ, ಕಲ್ಲಿನ ಕೋಡಿ, ರಬ್ಬಲ್ ಕಲ್ಲಿನ ತಡೆ, ಕೃಷಿ ಹೊಂಡ, ನೀರು ಕಾಲುವೆ, ಹೈನುಗಾರಿಕೆಗೆ ಮೇವು ಅಭಿವೃದ್ಧಿ, ಆರ್.ಆರ್.ಎಸ್., ಎಸ್.ಡಿ.ಎಸ್. ಮತ್ತು ಚಕ್ಡ್ಯಾಂ ನಂತಹ ಕಾಮಗರಿಗಳು, ವಿವಿಧ ಬಗೆಯ ತೋಟಗಾರಿಕೆ, ಕೃಷಿ ಅರಣ್ಯ ಕಾಮಗಾರಿಗಳು ಸೇರಿದಂತೆ ಅನೇಕ ಕಾಮಗಾರಿಗಳನ್ನು ನಡೆಸಬಹುದಾಗಿದೆ ಎಂದರು.
ತಂಡದ ಮುಖ್ಯಸ್ಥ ಸುರೇಶ ಕಮ್ಮಾರ ಅವರು ತಾಲೂಕಿನಲ್ಲಿ ಒಟ್ಟು 12 ಹಳ್ಳಿಗಳಲ್ಲಿ ಈ ಯೋಜನೆಗಳು ಜಾರಿಯಲ್ಲಿವೆ. ಚಂದಾಪುರ ಮತ್ತು ಚಿಕ್ಕಹರಳಳ್ಳಿ ಉಪಜಲಾನಯನ ಪ್ರದೇಶವೆಂದು ಕರೆಯಲಾಗಿದೆ. ಯೋಜನಾ ಅವಧಿ 5 ವರ್ಷಗಳಾಗಿದ್ದು, 5,285.00 ಹೆಕ್ಟೇರ್ ಪ್ರದೇಶ ಉಪಚಾರಕ್ಕೆ ಒಳಪಟ್ಟಿದೆ ಎಂದರು.
ನೀಡ್ಸ್ ಜಲಾನಯನ ಸಹಾಯಕ ಗಣೇಶ.ಕೆ ಸ್ವಾಗತಿಸಿದರು, ಗುಡ್ಡಪ್ಪ ಸೊಟ್ಟಪ್ಪನವರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ರೈತರು, ಸಂಸ್ಥೆಯ ಸಿಬ್ಬಂದಿ ಜಲಾನಯನ ಯೋಜನೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.