ಅನಿಷ್ಟ ದೇವದಾಸಿ ಪದ್ಧತಿ ನಿರ್ಮೂಲನೆಯಾಗಲಿ: ಬಂಗಾರೆಪ್ಪ
ಅಥಣಿ 09: ಅನಿಷ್ಟ ದೇವದಾಸಿ ಪದ್ಧತಿ ನಿರ್ಮೂಲನೆಯಾಗಬೇಕು ಎಂದು ತಾಲೂಕಾ ಪಂಚಾಯತ ಅಧಿಕಾರಿ ರವಿ ಬಂಗಾರೆಪ್ಪ ಹೇಳಿದರು.
ಅವರು ಅಥಣಿಯ ಸ್ತ್ರೀ ಶಕ್ತಿ ಭವನದಲ್ಲಿ ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೀಡಾದ ದೇವದಾಸಿಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಯೋಜನೆ, ತಾಲೂಕಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ದೇವದಾಸಿಯಂತಹ ಪದ್ಧತಿಯನ್ನು ಅಳಿಸಿಹಾಕುವುದರೊಂದಿಗೆ ಅವರನ್ನು ಅವರ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಆಗಬೇಕು, ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಸ್ಥಾನಮಾನ ಮುಂತಾದವುಗಳನ್ನು ಅವರಿಗೆ ದೊರಕಿಸಿಕೊಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದ ಅವರು ಕೋವಿಡ್ ಸಮಯದಲ್ಲಿ ಎಲ್ಲಕ್ಷೇತ್ರದ ಜನರು ತೊಂದರೆ ಪಡುವುದರೊಂದಿಗೆ ಆರ್ಥಿಕವಾಗಿ ತುಂಬಾ ಕುಸಿದಿದ್ದಾರೆ, ಅದರಂತೆ ದೇವದಾಸಿಯರೂ ಸಹ ಅತ್ಯಂತ ಕಷ್ಟದಾಯಕ ಜೀವನ ನಡೆಸಬೇಕಾಗಿ ಬಂದಿದೆ ಆದ್ದರಿಂದ ಅವರಿಗೂ ಸಹ ಸರಕಾರದಿಂದ ದೊರೆಯಬೇಕಾದ ಸಹಾಯವನ್ನು ವಿತರಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರವೀಣ ಪಾಟೀಲ ಮಾತನಾಡಿ ದೇವದಾಸಿ ಪಟ್ಟವನ್ನು ಕಟ್ಟಿ ಅವರನ್ನು ಸಮಾಜ ಕೀಳು ಮಟ್ಟದಲ್ಲಿ ಕಾಣುವ ಬದಲು ಅವರಿಗೂ ಸಹ ಸಮಾಜದಲ್ಲಿ ಗೌರವ ಸ್ಥಾನ ಮಾನಗಳನ್ನು ಕಲ್ಪಿಸಿ ಅವರೂ ಸಹ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
ದೇವದಾಸಿ ಪುನರ್ವಸತಿ ಯೋಜನಾ ಅನುಷ್ಠಾನ ಅಧಿಕಾರಿ ವೀಣಾ ಅಡಹಳ್ಳಿ ಮಾತನಾಡಿ ಸರಕಾರದಿಂದ ದೊರೆಯುವಂತಹ ಪ್ರತಿಯೊಂದು ಯೋಜನೆಗಳನ್ನು ಫಲಾನುಭವಿ ದೇವದಾಸಿಯರಿಗೆ ತಲುಪಿಸಲಾಗುತ್ತಿದೆ ಎಂದರು.