ಹದಗೆಟ್ಟ ಗೊಟಖಂಡ್ಕಿ-ಭಂಟನೂರ ರಸ್ತೆ; ತಪ್ಪದ ಗೋಳು!
ತಾಳಿಕೋಟಿ 11: ಸಮೀಪದ ಗೊಟಖಂಡ್ಕಿದಿಂದ ಭಂಟನೂರ ಗ್ರಾಮಕ್ಕೆ ಹೋಗುವ ಕೂಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು, ಬಸ್ ಪ್ರಯಾಣಿಕರು ಪರದಾಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗೊಟಖಂಡ್ಕಿ-ಭಂಟನೂರು ಸಂಪರ್ಕಿಸುವ 3 ಕಿ.ಮೀ ಉದ್ದದ ರಸ್ತೆ ಎಲ್ಲಿಯೂ ರಸ್ತೆಯಾಗಿ ಉಳಿದಿಲ್ಲ. ಎಲ್ಲಿ ನೋಡಿದರಲ್ಲಿ ಮಾರುದ್ದದ ತಗ್ಗು ಗುಂಡಿಗಳು ಬಿದ್ದಿವೆ. ಕೇವಲ 3ಕಿ.ಮೀ ಕ್ರಮಿಸಲು 20ನಿಮಿಷ ಬೇಕಾಗುತ್ತದೆ. ಗ್ರಾಮಸ್ಥರು ಛೀಮಾರಿ ಹಾಕುತ್ತಿದ್ದಾರೆ. ಕುಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಿಗಿಂತ ಈ ರಸ್ತೆ ಹೆಚ್ಚು ಹಾಳಾಗಿದ್ದು 3ಕಿ.ಮೀ ಉದ್ದದ ರಸ್ತೆಯಲ್ಲಿ ಪ್ರಯಾಣಿಸಲು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
ನರಕಯಾತನೆ: ತುರ್ತುಕಾರ್ಯ ನಿಮಿತ್ಯ ಈ ಮಾರ್ಗದ ಮುಖಾಂತರ ಬೇರೆ ಸ್ಥಳಗಳಿಗೆ ತೆರಳಲಿಕ್ಕೆ ಸಾಧ್ಯವಿಲ್ಲ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಲಿ ತೆಗೆದುಕೊಳ್ಳಲು ಗುಂಡಿಗಳು ಬಾಯ್ದೆರೆದುಕೊಂಡಿವೆ. ಈ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಜನತೆಗೆ ನರಕ ದರ್ಶನವಾದಂತಾಗುತ್ತದೆ.
ಸತ್ತ ಮೇಲೆ ಆಸ್ಪತ್ರೆ: ಈ ಭಾಗದಲ್ಲಿ ಅನಾರೋಗ್ಯಕ್ಕೀಡಾದ ರೋಗಿ ಇಲ್ಲವೆ ಹೆರಿಗೆಗೆ 108 ಅಂಬ್ಯುಲೆನ್ಸ್ ಮೂಲಕ ಸಮೀಪದ ತಾಳಿಕೋಟಿಗೆ ಕರೆದೊಯ್ಯುವುದು ಚಾಲಕರಿಗೆ ಈ ರಸ್ತೆ ಸವಾಲಾಗಿದೆ. ಹದಗೆಟ್ಟ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸರ್ಕಸ್ ಮಾಡುತ್ತಲೇ ರಸ್ತೆ ಕ್ರಮಿಸಬೇಕು. ಅಷ್ಟರಲ್ಲಿಯೇ ಗರ್ಭಿಣಿಗೆ ಆರೋಗ್ಯ ಕವಚದಲ್ಲೇ ಹೆರಿಗೆಯಾಗಬಹುದು. ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳ ಪ್ರಾಣ ಹೋಗಲೂ ಬಹುದಾಗಿದೆ.
ರಸ್ತೆ ಮರು ನಿರ್ಮಿಸಿ: ಸಂಪೂರ್ಣ ಹಾಳಾದ ಈ ರಸ್ತೆಯನ್ನು ದುರಸ್ತಿ ಮಾಡದೆ ಮರು ನಿರ್ಮಾಣ ಮಾಡಬೇಕು ಎನ್ನುವುದು ಇಲ್ಲಿಯ ಗ್ರಾಮಸ್ಥರ ಒಕ್ಕೋರಲಿನ ಬೇಡಿಕೆಯಾಗಿದೆ. ಈ ಕ್ಷೇತ್ರದ ಶಾಸಕರು ಈಗಲಾದರೂ ಈ ಹದಗೆಟ್ಟ ರಸ್ತೆಯ ಮರುನಿರ್ಮಾಣಕ್ಕೆ ಪ್ರಯತ್ನಿಸಬೇಕಾಗಿದೆ- ಇಲ್ಲದೆ ಹೋದಲ್ಲಿ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಬಹುದು.
“ಈ ಕ್ಷೇತ್ರದ ಶಾಸಕರು ಬ.ಸಾಲವಾಡಗಿ
ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳ
ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂಬುದಕ್ಕೆ
ಈ ಹದಗೆಟ್ಟ ರಸ್ತೆ ಉತ್ತಮ ಉದಾಹರಣೆಯಾಗಿದೆ.”
-ಶಿವರೆಡ್ಡಿ ಐನಾಪೂರ
ಕಾಂಗ್ರೆಸ್ ಮುಖಂಡರು ಭಂಟನೂರ