ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇರಬೇಕು: ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀ
ಇಂಡಿ 14: ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇರಬೇಕು. ಪ್ರತೀ ದಿನ ದುಡಿದು ಬಂದು ಊಟ ಮಾಡಿದರೆ ನೆಮ್ಮದಿಯ ನಿದ್ರೆ ಮಾಡಬೇಕು ಆಗಮಾತ್ರ ಬದುಕು ಸುಂದರವಾಗಿರುತ್ತದೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿಕ್ಷಕ ರೇವಣಸಿದ್ಧೇಶ್ವರವರ ಮಠ ಮತ್ತು ಮೀನಾಕ್ಷಿ ಆರ್. ಕಲ್ಲೂರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ಗ್ರಾಮದ ಆರ್.ಎಮ್. ಬಿರಾದಾರ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಧರ್ಮ ಎಂದರೆ ಮನಸ್ಸಿಗೆ ಶಾಂತಿ ಕುಡುವುದು ಮತ್ತು ಆತ್ಮಕ್ಕೆ ಆನಂದ ಕೊಡುವುದಾಗಿದೆ. ಮನೆ ನೋಡು ಬಡವನು, ಮನಸ್ಸು ನೋಡು ಬಲ್ಲಿದನು ಎಂದು ಕೂಡಲಸಂಗಮರು ಬಾಳುವದು, ಬದುಕುವದು, ಮನಸ್ಸು ದೊಡ್ಡದಿರುವವನು ತೋರಿಸಿದ್ದಾರೆ. ಎಲ್ಲರನ್ನು ಕಂಡು ಆನಂದ ಪಡುವವನು ಶ್ರೀಮಂತ ಎಂದರು.
ಮುಂಬಯಿ ಸೇರಿದಂತೆ ದೊಡ್ಡ ಪಟ್ಟಣಗಳಲ್ಲಿ ಅಂತಸ್ತಿನ ಮನೆಗಳಿರುತ್ತವೆ. ಮುಖದ ಮೇಲೆ ಕಳೆ, ವೈಭವ ಇರುವದಿಲ್ಲ. ಜೀವನ ಬಡವಾಗಿರುತ್ತದೆ. ಎಂದೂ ನೋವು ವ್ಯಕ್ತಿ ಮಾಡಬಾರದು. ನಗುತ್ತಾ ಬಾಳುವದೇ ಜೀವನ. ಅಲ್ಲಿಯೇ ಕೂಡಲಸಂಗಮನಿರುತ್ತಾನೆ ಎಂದರು.
ಮಂಟಪ ನಿರ್ಮಿಸಿ ಎಲ್ಲರಿಗೂ ಅನುಕೂಲ ಮಾಡಿಕೊಟ್ಟು ತಮ್ಮ ಹೃದಯ ಶ್ರೀಮಂತಿಕೆ ತೋರಿಸಿದ್ದಾರೆ. ಅವರು ಎಂದೆಂದಿಗೂ ಶ್ರೀಮಂತ ಎಂದರು.
ಬಿರು-ಬಿಸಿಲಿನಲ್ಲಿ ಪ್ರವಚನ ಆಲಿಸಿದ ಭಕ್ತರು:
ಕಾರ್ಯಕ್ರಮ ಆಯೋಜಕರು ಬಂದ ಭಕ್ತಾದಿಗಳಿಗೆ ಪೆಂಡಾಲ್ ಹಾಕಿಸಿರಲಿಲ್ಲವಾದರೂ ಬಿರು ಬಿಲಿನಲ್ಲಿಯೇ ಸಾವಿರಾರು ಜನ ಭಕ್ತರು ಸಿದ್ದೇಶ್ವರ ಶ್ರೀಗಳ ವಾಣಿಯನ್ನು ಆಲಿಸಿದರು.
ಅಥರ್ಗಾದ ರೇವಣಸಿದ್ಧೇಶ್ವರ ಮಠದ ಮುರಗೇಂದ್ರ ಶಿವಾಚಾರ್ಯರು, ಗದಗದ ಸದಾಶಿವ ಮಹಾಸ್ವಾಮಿಗಳು, ಅಥರ್ಗಾದ ಷಣ್ಮುಖಾರೂಢ ಆಶ್ರಮದ ಈಶಪ್ರಸಾದ ಶ್ರೀಗಳು, ಶಾಸಕ ಯಶವಂತರಾಯಗೌಡ ಪಾಟೀಲ, ನಿವೃತ್ತ ಡಿಜಿಪಿ ಗ್ರಾಮದ ಬಿ.ಡಿ.ಪಾಟೀಲ, ಧರ್ಮರಾಜ ಮುಜಗೊಂಡ ಮಾತನಾಡಿದರು.
ಶಿರಶ್ಯಾಡದ ಆಭಿನವ ಮುರಗೇಂದ್ರ ಶ್ರೀಗಳು, ಕಾತ್ರಾಳದ ಅಮೃತಾನಂದ ಶ್ರೀಗಳು, ಡಾಽಽ ಎಮ್.ಎಸ್. ಕಲ್ಲೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟಿಲ, ಗ್ರಾ.ಪಂ ಅಧ್ಯಕ್ಷೆ ಸುವರ್ಣಾ ಶಿವೂರ ವೇದಿಕೆ ಮೇಲಿದ್ದರು.
ಸ್ಥಳೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು.
ಮುಖ್ಯ ಗುರು ಬಂಟನೂರ, ರವಿ ಕಲ್ಲೂರ, ಸುನೀಲ ರಬಶೆಟ್ಟಿ , ರೇವಣ್ಣ ಅಂಕಲಗಿ, ಶಿವು ನಿಂಬಾಳ, ಬಸವರಾಜ ಕಾಸಬಾಗ, ಅಶೋಕಗೌಡ ಪಾಟೀಲ ಮತ್ತಿತರಿದ್ದರು.