ಸಾರ್ವಜನಿಕರ ಸಮಸ್ಯೆಗೆ ಜಿಲ್ಲಾಧಿಕಾರಿ ದಾನಮ್ಮನವರ ಸ್ಪಂದನೆ
ತಾಳಿಕೋಟಿ 23: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಉತ್ತಮವಾಗಿ ಸ್ಪಂದಿಸಿದರು.
ಮಂಗಳವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸರದಿ ಪ್ರಕಾರವಾಗಿ ಕರೆದು ಆಲಿಸಿದರು. ಪಟ್ಣದ ಸಾರ್ವಜನಿಕರಿಂದ ಅತೀ ಹೆಚ್ಚು ಅರ್ಜಿಗಳು ತಾಳಿಕೋಟಿ ಪುರಸಭೆಯ ದುರಾವ್ಯವಸ್ಥೆಯ ಕುರಿತು ಬಂದಿದ್ದವು. ಇದರಲ್ಲಿ ಮುಖ್ಯವಾಗಿ ಸಾರ್ವಜನಿಕ ಉದ್ಯಾನವನಗಳ, ಉತಾರೆ ಕೊಡುವ ಕುರಿತು, ಹಾಗೂ ಹೊಸ ಲೆಓಟ್ಗಳಲ್ಲಿ ಸೆಟ್ಬ್ಯಾಕ್ ಬಿಡದೆ ಇರುವ ಕುರಿತು ಹಾಗೂ ಸಾರ್ವಜನಿಕರ ಕೆಲಸ ಸಮಯಕ್ಕೆ ಸರಿಯಾಗಿ ಮಾಡದೆ. ಸತಾಯಿಸುವುದರ ಕುರಿತ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆದಷ್ಟು ಬೇಗ ಇದನ್ನೂ ಸರಿಪಡಿಸಲು ಆದೇಶಿಸಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸದಿರುವ ಕುರಿತು ಹಾಗೂ ಅಲ್ಲಿ ಈ ಮೊದಲು ನಡೆದ ಭ್ರಷ್ಟಾಚಾರದ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ವಕೀಲರೊಬ್ಬರು ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಗ ತಾಲೂಕಾಆರೊಗ್ಯಾಧಿಕಾರಿ ತಿವಾರಿ ಇವರಿಂದ ಮಾಹಿತಿ ಪಡೆದು ಆದಷ್ಟು ಬೇಗ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಆದೇಶಿಸಿದರು. ಸುಮಾರು 5 ವರ್ಷಗಳ ಹಿಂದೆ ಆಶ್ರಯ ಮನೆಗಳಿಗಾಗಿ 340 ಫಲಾನುಭವಿಗಳಿಂದ ತಲಾ 50.000 ರೂ ಪಡೆದುಕೊಂಡ ಕುರಿತು ಪಟ್ಟಣದ ತಮ್ಮ ಅಳಲನ್ನು ಜಿಲ್ಲಾಧಿಕಾರಿಗಳ ಮುಂದೆ ಪುರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹಾಗೂ ಪರಶುರಾಮ ತಂಗಡಗಿ ಇವರ ಮೂಲಕ ತಂದಾಗ ಜಿಲ್ಲಾಧಿಕಾರಿಗಳು ಸ್ವತಃ ಬೆಂಗಳೂರು ಕಾರ್ಯಾಲಯಕ್ಕೆ ಮಾತನಾಡಿ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಅವ್ಯಾಹಿತವಾಗಿ ನಡೆಯುತ್ತಿರುವುದರ ಕುರಿತು ಸಮಾಜ ಸೇವಕ ನಾಗರಾಜ ಮೋಟಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಗ ಅಕ್ರಮ ನಡೆಸುವವರ ನಿಖರ ಮಾಹಿತಿ ತಿಳಿಸಿದರೆ ಕ್ರಮ ಜರುಗಿಸುವುದಾಗಿ ಹೇಳಿದರು. ಸರ್ಕಾರಿ ಶಾಲಾ ಸುತ್ತ ಕಂಪೌಂಡ ಇರದೆಇರುವುದರಿಂದ ನಡೆಯುತ್ತಿರುವ ಕಾನೂನು ಬಾಹೀರ ಕೆಲಸಗಳ ಕುರಿತು ಶಿಕ್ಷಕರು ಗಮನ ಹರಿಸಿದಾಗ ಜಿಲ್ಲಾಧಿಕಾರಿಗಳು ತಾ.ಪಂ. ಇಓಗೆ ಆದೇಶ ನೀಡಿದರು. ಹಾಗೂ ಕಾನೂನು ಬಾಹೀರ ಕಾರ್ಯಗಳು ನಡೆಯದಂತೆ ನೊಡಿಕೊಳ್ಳಲು ಸ್ಥಳಿಯ ಪಿಎಸ್ಐಗೆ ತಿಳಿಸಿದರು. ಗ್ರಾಮೀಣ ಭಾಗದ ಜನರಿಂದ ಬಂದಂತಹ ಅರ್ಜಿಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಹೊಲಗಳಿಗೆ ಹೊಗುವ ದಾರಿ, ಸ್ಮಶಾನ ಜಾಗ, ಆರೊಗ್ಯ ಸೇವೆಯ ಕುರಿತ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹರಿಸಲು ತಿಳಿಸಿದರು.
ಪಟ್ಟಣದಲ್ಲಿ ಬಹುದಿನಗಳಿಂದ ನಡೆಯುತ್ತಿರುವ ತಾಳಿಕೋಟಿ-ಹಡಗಿನಾಳ ಮಾರ್ಗದ ಮುಖ್ಯ ಸೇತುವೆ ರಸ್ತೆ ನೇರವಾಗಿ ನಿರ್ಮಿಸುವುದರ ಕುರಿತು ಇರುವ ಅರ್ಜಿಯಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಅಧಿಕಾರಿಗೆ ಕೆಲವು ಆದೇಶಗಳನ್ನು ನೀಡಿದರು. ಸತತ 3 ಘಂಟೆಗಳಿಗಿಂತಲು ಹೆಚ್ಚು ಕಾಲ ಸಾರ್ವಜನಿಕರ ಸಮಸ್ಯೆಗಳನ್ನಾಲಿಸಿದ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಗೋಟೂರ, ತಾ.ಪಂ. ಇಓ ಬಿ. ಆರ್. ಬಿರಾದಾರ, ಕೆಆರ್ಡಿಸಿಎಲ್ ಎಇಇ ಎಸ್. ಬಿ. ಪಾಟೀಲ, ತಾಲೂಕಾ ಆರೊಗ್ಯಾಧಿಕಾರಿ ಸತೀಶ ತಿವಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಸ್ ಎಂ ಸಜ್ಜನ, ಪುರಸಭೆ ಮುಖ್ಯಾಧಿಕಾರಿ, ಸುರೇಶ ನಾಯಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಲಮಾಣಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಮತ್ತೀತರರು ಉಪಸ್ಥಿತರಿದ್ದರು.