ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಪ್ರಾತ್ಯಕ್ಷಿಕೆ
ರಾಣಿಬೆನ್ನೂರ 09: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾವಿನ ಬೆಳೆಯ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಶಿಗ್ಗಾಂವ್ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ ಮಾತನಾಡಡಿ, ಜಿಲ್ಲೆಯಲ್ಲಿ ಸುಮಾರು 5600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವ ಮಾವಿನ ಬೆಳೆಯನ್ನು ಜಿಲ್ಲೆಯ ಬೆಳೆಯಾಗಿ ಕೇಂದ್ರ ಸರ್ಕಾರದಿಂದ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಮಾವಿನ ಬೆಳೆಯ ಸಂಸ್ಕರಣೆ ಕೊಯ್ಲೋತ್ತರ ನಿರ್ವಹಣೆ, ಶೇರಖಣೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ ಎಂದರು.
ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಮಾತನಾಡಿ, ಮಾವು ರೋಗ ನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ. ಹಾಗೇಯೆ ಕ್ಷೀಣಿಸುತ್ತಿರುವ ಮಣ್ಣಿನ ಗುಣಮಟ್ಟದಿಂದ ಲಘುಪೋಷಕಾಂಶಗಳನ್ನು ಮಣ್ಣಿಗೆ ನೀಡಬೇಕು ಎಂದರು.
ಡಾ. ಕೆ. ಪಿ. ಗುಂಡಣ್ಣವರ ಮಾತನಾಡಿ, ಮಾವಿನಲ್ಲಿ ಜಿಗಿ ಹುಳುಗಳ ನಿಯಂತ್ರಣಕ್ಕೆ 2 ಮಿ.ಲಿ ಮೇಲಾಥಿಯನ್ ಅಥವಾ 0.25 ಮಿ.ಲಿ ಇಮಿಡಾಕ್ಲೋಪ್ರೀಡ್ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹಣ್ಣಿನ ನೊಣಗಳ ನಿಯಂತ್ರಣಕ್ಕೆ ಪ್ರತಿ ಎಕರೆಗೆ 4 ರಿಂದ 5 ಮೋಹಕ ಬಲೆಗಳನ್ನು ಬಳಸಬೇಕು. ಬೂದಿರೋಗದ ನಿರ್ವಹಣೆಗೆ ಹೂವು ಬಿಡುವ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೆ 1 ಮಿ.ಲಿ ಹೆಕ್ಸಾಕೋನಾಜೋಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದರು.
ಪ್ರಗತಿ ಪರ ರೈತ ಚಂದ್ರಪ್ಪ ನಡುವಿನಮನಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸುರೇಶ ಮತ್ತು ಸುಮಾರು 20 ಜನ ಆಸಕ್ತ ರೈತರು ಪಾಲ್ಗೊಂಡಿದ್ದರು.