ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 29: ಪಟ್ಟಣದ ದೇವಲಾಪೂರ ರಸ್ತೆಯಲ್ಲಿರುವ ಬಸವೇಶ್ವರ ಆಶ್ರಯ ಕಾಲೂನಿ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಸವೇಶ್ವರ ಆಶ್ರಯ ಕಾಲೂನಿಯಿಂದ ಚನ್ನಮ್ಮನ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಪುರಸಭೆ ಮುಖ್ಯಾಧಿಕಾರಿ, ವಾರ್ಡನ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು. ಬಡ ಜನರಿಗೆ ನಿರ್ಮಿಸಿರುವ ಕಾಲೂನಿಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕೆಸರಿನಿಂದ ಕೂಡಿವೆ. ಗಟಾರಗಳು ತುಂಬಿ ಹರಿಯುತ್ತಿದ್ದು ದುರ್ನಾತ ಹರಡಿವೆ. ಇದರಿಂದ ಸೊಳ್ಳೆಗಳ ಹಾವಳಿ ಜೋರಾಗಿದೆ. ಬೀದಿ ದೀಪಗಳಿಲ್ಲದೆ ಕತ್ತಲೆ ಆವರಿಸಿದೆ. ಕುಡಿಯುವ ನೀರಿನ ಸಮಸ್ಯೆ ತಲೆ ದೂರಿದೆ. ಈ ಎಲ್ಲ ಸಮಸ್ಯೆಗಳನ್ನು ಆಲಿಸಿ ಬಗೆ ಹರಿಸಬೇಕಿದ್ದ ವಾರ್ಡ್ ಸದಸ್ಯರು ನಿವಾಸಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವವಹಿಸಿ ಮಾತನಾಡಿ, 'ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ವಾರ್ಡಗಳಲ್ಲಿ ರಸ್ತೆಗಳು ಹಾಳಾಗಿವೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ಚರಂಡಿ ಬಳಸಿಲ್ಲ. ಪುರಸಭೆ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧಿಕಾರಿಗಳು ಏಕೆ ನಿರ್ಲಕ್ಷ್ಯವಹಿಸಿದ್ದೀರಿ. ನಾಗರಿಕ ಸಮಸ್ಯೆಗಳನ್ನು ಏಕೆ ನಿವಾರಿಸುತ್ತಿಲ್ಲ. ಕೂಡಲೇ ರಸ್ತೆ ದುರಸ್ತಿ ಸೇರಿದಂತೆ ನಾಗರಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ' ಅವರು ಎಚ್ಚರಿಸಿದರು.
ವಿಷಯ ತಿಳಿದು ಮುಖ್ಯಾಧಿಕಾರಿ ಕೆ.ಐ.ನಾಗನೂರ, ಇಂಜೀನೀಯರ ಮಂಜುನಾಥ ಪಾಟೀಲ ಭೇಟಿ ನೀಡಿ ಸಮಸ್ಯೆ ಆಲಿಸಿ ರೂ.1.61 ಕೋಟಿ ಹಣ ಬಿಡುಗಡೆಯಾಗಿದೆ ಶಿಘ್ರದಲ್ಲಿ ಟೆಂಡರ ಕರೆದು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಂತೋಷ ಪಶುಪತಿಮಠ, ಸಂಜು ಮುರಗೋಡ, ಅನೀಲ ದೊಡವಾಡ, ಮಲ್ಲಿಕಾರ್ಜುನ ಬಾಜಿ, ಕಿರಣ ಬೆಳಗಾವಿಮಠ, ಆನಂದ ಹೊಂಗಲ, ಚೌಡಪ್ಪ ಬಂಡಿವಡ್ಡರ, ಮಂಜುನಾಥ ದೇಗಾಂವಿ, ಸೋಮಶೇಖರ ಪೆಂಟೇದ, ವರುಣ ಏಣಗಿಮಠ, ಆನಂದ ಪೆಂಟೇದ, ರವಿ ತಿಮ್ಮಣ್ಣವರ, ಬಸಯ್ಯ ಪೂಜೇರಿ, ನಿವಾಸಿಗಳು ಇದ್ದರು. ಸಿಪಿಐ ಯು.ಎಚ್.ಸಾತೇನಹಳ್ಳಿ ಪೊಲೀಸ್ ಬಂದು ಬಸ್ತ್ ಕೈಕೊಂಡಿದ್ದರು.