ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಗ್ರಹ
ರಾಣೇಬೆನ್ನೂರು 14: ರೈತನೇ ಭಾರತದ ಬೆನ್ನೆಲುಬು ಅಂತಹ ಅನ್ನದಾತ ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆ ಕೈಗೆ ಸಿಗಲಾರದೇ ತ್ರಿಶಂಕು ಸ್ಥಿತಿಯಲ್ಲಿದ್ದಾನೆ ಆದ್ದರಿಂದ ಸರಕಾರ ರೈತರ ನೆರವಿಗೆ ಧಾವಿಸಿ ಸಮರೋಪಾದಿ ಪರಿಹಾರಕ್ಕೆ ಮುಂದಾಗಬೇಕೆಂದು ಉತ್ತರ ಕರ್ನಾಟಕ ಪ್ರದೇಶರೈತ ಹಾಗೂ ರೈತಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಒತ್ತಾಯಿಸಿದರು.
ನಗರದಲ್ಲಿ ತಹಶೀಲದಾರ ಜಿ.ಎಸ್.ಶಂಕರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಾಡಿಕೆಗಿಂತ 40ಅ ಹೆಚ್ಚಿಗೆ ತಾಲೂಕಿನಾದ್ಯಂತ ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆ ನೀರು ಪಾಲಾಗಿದ್ದು ಮನೆಗಳು ಸಹ ಕುಸಿದು ಬಿದ್ದಿವೆ ಜೊತೆಗೆ ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತವೆ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿರುವ ರೈತರ ಬದುಕು ಚಿಂತಾಜನಕವಾಗಿದೆ ಎಂದರು.
ಸರ್ಕಾರವು ರೈತರ ಮೇಲೆ ಇರುವ ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಮಾಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಸಂಪೂರ್ಣವಾಗಿ ನಾಶವಾದ ಬೆಳೆ ಕುರಿತು ಸಮೀಕ್ಷೆಯನ್ನು ಮಾಡಿ ಸರ್ಕಾರದವರು ಪ್ರತೀಎಕರೆಗೆ 50 ಸಾವಿರ ರೂ.ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಪ್ರದೇಶರೈತ ಹಾಗೂ ರೈತಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಕಿರಣಕುಮಾರ ಚೌಡಣ್ಣನವರ ಮಾತನಾಡಿ, ಭಾರತ ದೇಶಾದ್ಯಂತ ಕರ್ನಾಟಕ ರಾಜ್ಯವು ರೈತರ ಆತ್ಮಹತ್ಯೆಯಲ್ಲಿ 2 ನೇ ಸ್ಥಾನದಲ್ಲಿದ್ದು ಸಾವಿನ ಸಂಖ್ಯೆ 19.3ಅ ರಷ್ಟುಇರುವುದು ಕಳವಳಕಾರಿ ಸಂಗತಿಯಾಗಿದೆ.
ತಾಲೂಕಿನಲ್ಲಿ ಅತೀವೃಷ್ಠಿಯಿಂದ ಹಾನಿಗೊಳಗಾದ ರೈತ ರೈತಕಾರ್ಮಿಕರ ಮನೆಗಳು ಬಿದ್ದಿದ್ದು, ಸದರ ಮನೆಗಳ ಸ್ಥಳ ಪರೀಶೀಲನೆ ಮಾಡಿ ಶೀಘ್ರದಲ್ಲಿಯೇ ನೊಂದವರ ಪಾಲಿಗೆ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಹೊಸದಾಗಿ ಬೆಳೆ ಸಾಲವನ್ನು ಮಂಜೂರ ಮಾಡಬೇಕು. ಕಾರಣ ರೈತರು ಎಲ್ಲ ಸಂಕಷ್ಠಗಳ ಸರಮಾಲೆಯನ್ನೇ ಮೈತುಂಬಾ ಹೊತ್ತುಕೊಂಡು ಸಾಲದ ಸುಳಿಗೆ ಸಿಲುಕಿ ತೀರಿಸಲಾರದೇ ಆತ್ಮಹತ್ಯೆಯಂತಹ ಹೀನಕೃತ್ಯಕ್ಕೆ ಶರಣಾಗುತ್ತಿದ್ದಾನೆ. ಆದ್ದರಿಂದ ಸರಕಾರ ರೈತ/ ರೈತ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟು ಎಲ್ಲ ಬೇಡಿಕೆಗಳನ್ನು ಅತೀ ಶೀಘ್ರದಲ್ಲಿ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣಪ್ಪ ಪೂಜಾರ, ರಾಜ್ಯ ಉಪಾಧ್ಯಕ್ಷರಾದ ಜಪ್ರುಲ್ಲಾ ಮುಲ್ಲಾ, ಡಾ. ನಾಗರಾಜ ಚಳಗೇರಿ, ರುದ್ರ್ಪ ಪೂಜಾರ, ರಾಜ್ಯ ಸಲಹಾ ಸಮೀತಿ ಅಧ್ಯಕ್ಷ ಎಚ್.ಟಿ. ಅರಳಿಕಟ್ಟಿ, ಜಿಲ್ಲಾಧ್ಯಕ್ಷ ಡಿ.ಕೆ.ಕಟಗಿ, ನಗರಘಟಕದ ಅಧ್ಯಕ್ಷ ಮಹೇಶ ಕಂಬಳಿ, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಶಶಿಕಲಾ ಕಣವೇರ, ಉಪಾಧ್ಯಕ್ಷೆ ನಾಗರತ್ನಾ ಬಡೇನಾಯ್ಕ, ಮಲ್ಲಿಕಾರ್ಜುನ ಬಿದಿರಿಕಟ್ಟಿ ಸೇರಿದಂತೆ ನೂರಾರು ರೈತರು ಇದ್ದರು.