ಡಾ. ಬಾಬು ಜಗಜೀವನ ರಾಮ್ ಸಮುದಾಯ ಭವನಕ್ಕೆ ನಿವೇಶನ, ಎಸ್ಸಿ ಎಸ್ಟಿ ಸಮುದಾಯಕ್ಕೆ ರುದ್ರಭೂಮಿ ಮಂಜೂರಿಗೆ ಆಗ್ರಹ
ಲೋಕದರ್ಶನ ವರದಿ
ಹಾವೇರಿ 07: ಡಾ:ಜಗಜೀವನ ರಾಮ್ ಜಿಲ್ಲಾ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಎಸ್ಸಿ/ಎಸ್ಟಿ ಸಮುದಾಯಕ್ಕೆ ರುದ್ರಭೂಮಿಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಉಡಚಪ್ಪ ಮಾಳಗಿ ಅವರು ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನಾ ಸಭೆಯಲ್ಲಿ ಸಕ್ಕರೆ ಮತ್ತು ಜವಳಿ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.
ನಗರ ವ್ಯಾಪ್ತಿಯಲ್ಲಿ 15-20 ವರ್ಷಗಳಿಂದಲೂ ಡಾಽಽ ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಾನಕ್ಕೆ 1 ಎಕರೆ ನಿವೇಶನ ನೀಡಲು ಒತ್ತಾಯ ಮಾಡುತ್ತಾ ಬರುತ್ತಿದ್ದು, ಇದುರೆಗೂ ನಿವೇಶನ ಮಂಜೂರು ಆಗಿರುವುದಿಲ್ಲಾ.ಇದೇ ರೀತಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ರುದ್ರಭೂಮಿಗೆ ಜಮೀನು ಮಂಜೂರು ಆಗಿಲ್ಲವಾದ್ದರಿಂದ ಸ್ಮಶಾನಕ್ಕೆ ಬಹಳ ತೊಂದರೆ ಆಗಿರುತ್ತದೆ.ಎಸ್ಸಿ/ಎಸ್ಟಿ ಸಮುದಾಯಗಳ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರಗಳಿಂದ ಈ ಸಮುದಾಯಗಳಿಗೆ ತೊಂದರೆ ಆಗಿರುತ್ತದೆ.
ಕಳೆದ 20 ವರ್ಷಗಳಿಂದಲೂ ಬೇಡಿಕೆ ಇದ್ದರೂ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ.ಈ ಸಮುದಾಯಗಳ ನಾಗರೀಕರು ಮರಣ ಹೊಂದಿದಾಗ ಅಂತ್ಯಕ್ರಿಯೆಗೆ ಜಾಗವೇ ಇಲ್ಲದೆ ತುಂಬಾ ಸಮಸ್ಯೆ ಆಗಿರುತ್ತದೆ.ಸರ್ಕಾರ ಹಾಗೂ ಮಾನ್ಯ ಉಸ್ತುವಾರಿ ಸಚಿವರು ಸಮುದಾಯಗಳ ಜನರ ಈ ಎರಡು ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು.
ಈಡೇರಿಸದಿದ್ದರೆ ಪ್ರತಿಭಟನೆ ಮಾಡುವುದಲ್ಲದೆ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸುವುದೆಂದು ರಾಜ್ಯ ಸಂಘಟನಾ ಸಂಚಾಲಕರಾದ ಉಡಚಪ್ಪ ಮಾಳಗಿ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಮನವಿಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ರವಾನೆ ಮಾಡಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಾರುತಿ ಸೊಟ್ಟಪ್ಪನವರ,ಎನ್ ಟಿ ಮಂಜುನಾಥ,ಕೆ ವ್ಹಿ ಬಿಷ್ಟಣ್ಣನವರ,ಮಾರ್ತಂಡಪ್ಪ ಹರಿಜನ ಸೇರಿದಂತೆ ಅನೇಕರಿದ್ದರು.