ರಾಣೆಬೆನ್ನೂರ

ರೈತ ವಿರೋಧಿ ಮಸೂದೆ ರದ್ದುಪಡಿಸಬೇಕೆಂದು ಒತ್ತಾಯ

ರೈತ ವಿರೋಧಿ ಮಸೂದೆ ರದ್ದುಪಡಿಸಬೇಕೆಂದು ಒತ್ತಾಯ

ರಾಣೇಬೆನ್ನೂರು 19: ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕೃಷಿ ತಿದ್ದುಪಡಿ ಮಸೂದೆಗಳನ್ನು ಶಾಶ್ವತವಾಗಿ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಗುರುವಾರ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ಚಳುವಳಿ ನಡೆಸಿ ಪ್ರತಿಭಟಿಸಿ ನಂತರ ಗ್ರೇಡ್ 2 ತಹಸೀಲ್ದಾರ ಅರುಣಕುಮಾರ ಅವರ ಮುಖಾಂತರ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ರೈತನೇ ಬೆನ್ನೆಲುಬು ಎಂದು ಹೇಳುವ ಸರಕಾರಗಳು ಈ ಹಿಂದೆ ಇದ್ದವು. ಆದರೆ, ಈಗಿನ ನರೇಂದ್ರಮೋದಿಯವರ ನೇತೃತ್ವದ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಹಾಗೂ ದೊಡ್ಡ ದೊಡ್ಡ ಉದ್ಯಮಿಗಳಿಗೆ ಮಣೆ ಹಾಕುವ ಮೂಲಕ ರೈತ ವಿರೋಧಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದು ಶಾಸ್ವತವಾಗಿ ರೈತ ಕುಲವನ್ನೇ ನಾಶ ಮಾಡಲು ಹೊರಟಿದೆ. ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವೇ ನಿಮ್ಮ ರೈತ ವಿರೋಧಿ ನೀತಿಯನ್ನು ಖಂಡಿಸುತ್ತಿದೆ. ಆದ್ದರಿಂದ ಕೂಡಲೇ ರೈತ ವಿರೋಧಿ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ನಗರಸಭೆ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ರೈತ ವಿರೋಧಿ ಮಸೂದೆಗಳನ್ನು ವಾಪಾಸ್ ಪಡೆಯಬೇಕೆಂದು ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರ ಹೋರಾಟ ನಡೆಯುತ್ತಿದ್ದು, ಈ ಹೋರಾಟದಲ್ಲಿ ಪಾಲ್ಗೊಂಡ ಸುಮಾರು 60 ಜನ ರೈತರು ಸಾವನ್ನಪ್ಪಿದ್ದರೂ ಕೂಡಾಕೇಂದ್ರ ಸರಕಾರ ತಲೆ ಕೆಡಿಸಿಕೊಳ್ಳದೆ ಇರುವುದು ರೈತ ವಿರೋಧಿ ನೀತಿಯಾಗಿದೆ. ಇದನ್ನು ರದ್ದುಪಡಿಸಬೇಕೆಂದು ಜ26 ರಂದು ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ಕಡೆ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿದರೂ ಸಹ ಹಿಂಪಡೆಯದೆ ಇರುವುದು ಈ ದೇಶದ ರೈತರ ದುರದೃಷ್ಟಕರ ಸಂಗತಿ ಎಂದರು.

ನಗರಸಭೆ ಇನ್ನೋರ್ವ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಮುಖಂಡರುಗಳಾದ ಎಸ್.ಡಿ.ಹಿರೇಮಠ, ಬಸಣ್ಣ ಕೊಂಗಿ, ಸುರೇಶಪ್ಪ ಗರಡಿಮನಿ ಮಾತನಾಡಿದರು. ಮುಖಂಡರುಗಳಾದ ಹರಿಹರಗೌಡ ಪಾಟೀಲ, ದಿಳ್ಳೆಪ್ಪ ಸತ್ಯಪ್ಪನವರ, ಸಾಬಜಾನ್, ನಾಗರಾಜ ಸೂರ್ವೆ, ಸಂತೋಷ ಎನ್.ಜಿ., ಶಶಿಧರ ಬಸೇನಾಯ್ಕರ, ಸುರೇಶ ಜಡಮಲಿ, ಆನಂದ ಹುಲ್ಬನಿ, ಎಸ್.ಬಿ.ಹೊಸಗೌಡ್ರ, ನಾಗರಾಜ, ಮಹೇಶಪ್ಪ, ಶಾಕೀರಾ, ಮಹ್ಮದಸಾಬ್ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಓದಿ