ರಸ್ತೆ ದುರಸ್ತೆ: ಪರದಾಡುವ ಪರಿಸ್ಥಿತಿ ನಿರ್ಮಾಣ
ಬನವಾಸಿ 17: ಪಟ್ಟಣದ ಪ್ರಮುಖ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ದಿನಗಳಿಂದ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಮಳೆ ಬಂದರೆ ಗುಂಡಿಯಲ್ಲಿ ನೀರು ನಿಂತುಕೊಂಡು ರಸ್ತೆ ಕಾಣದಂತೆ ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರುವುದು ಗ್ಯಾರಂಟಿ. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಸಂಚಾರಿಸುತ್ತದೆ. ಅಲ್ಲದೇ ಗ್ರಾಮ ಪಂಚಾಯತಿ ಕಛೇರಿ, ನಾಡ ಕಛೇರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಅಷ್ಟೊಂದು ಗುಂಡಿಗಳು ಬಿದ್ದಿರುವುದು ಯಾವ ಅಧಿಕಾರಿಗಳ ಕಣ್ಣಿಗೆ ಕಾಣದೇ ಇರುವುದು ವಿಪರ್ಯಸವೇ ಸರಿ. ಅಲ್ಲದೇ ಜನ ಪ್ರತಿನಿಧಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ ಅವರು ಸಹ ಮೌನವಹಿಸಿರುವುದು ಸಾರ್ವಜನಿಕ ಅಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಇಲಾಖೆಯವರು ಮಳೆಗಾಲ ಆರಂಭವಾಗುವ ಮೊದಲೇ ರಸ್ತೆಗಳನ್ನು ದುರಸ್ತಿ ಕಾರ್ಯ ಮಾಡಬೇಕಿತ್ತು. ಮಳೆಗಾಲವಾಗಿರುವುದರಿಂದ ನೀರು ಗುಂಡಿಗಳಲ್ಲಿ ನಿಂತು ಪಾದಚಾರಿಗಳಿಗೆ ಕೊಳಕು ನೀರಿನ ಅಭಿಷೇಕವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪಟ್ಟದ ಪ್ರಮುಖ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಗಮನಿಸಿದ್ದೇನೆ. ಕೆಎಸ್‌ಆರ್‌ಟಿಸಿ ನಿಲ್ದಾಣದ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಶೀಘ್ರದಲ್ಲೇ ಗುಂಡಿಗಳನ್ನು ಮುಚ್ಚಿಸುತ್ತೇವೆ.
-ಪರಶುರಾಮ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬನವಾಸಿ