ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ
ಬ್ಯಾಡಗಿ 15: ಕೋವಿಡ್’ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯ, ಸಹಕಾರವನ್ನು ನೀಡುವ ಜೊತೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಜನರ ಕುಟುಂಬಗಳಿಗೆ ಸರ್ಕಾರದಿಂದ ಶೀಘ್ರವಾಗಿ ಪರಿಹಾರ ಒದಗಿಸಲು ಒತ್ತಾಯಿಸುವುದಾಗಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಜನರ ಸಂಖ್ಯೆಯನ್ನು ಗುರುತಿಸಲು ಕಾರ್ಯಕರ್ತರಿಗೆ ಅಧಿಕೃತವಾಗಿ ಮನೆಮನೆಗೆ ತೆರಳಿ ಸರ್ವೆ ಮಾಡಲು ತಿಳಿಸಿದರು. ಇದರಿಂದ ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಒತ್ತಾಯಿಸಲು ಅನುಕೂಲವಾಗುವುದು. ಅಲ್ಲದೇ ಕೆಪಿಸಿಸಿ ಅಧ್ಯಕ್ಷರ ಆದೇಶದಂತೆ ಪಕ್ಷದ ಸಂಘಟನೆ ಮತ್ತು ವಿವಿಧ ಘಟಕದ ಆಯ್ಕೆ ಮಾಡುವ ಕುರಿತು ಚರ್ಚಿಸುತ್ತ, ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿ ಪಂಚಾಯಿತಿ ಹಾಗೂ ಪುರಸಭೆಯ ಪ್ರತಿ ವಾರ್ಡಿನಲ್ಲಿಯೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೂಡಿಕೊಂಡು ಪಕ್ಷದ ಸಂಘಟನೆಯ ಕುರಿತು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಕಟ್ಟೇಗೌಡರ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕರಾದ ಶ್ರೀನಿವಾಸ ಹಳ್ಳಳ್ಳಿ, ಮುಖಂಡರಾದ ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತ್ತಿ, ಪ್ರಕಾಶ್ ಬನ್ನಿಹಟ್ಟಿ, ದಾನಗೌಡ ತೋಟದ, ಮಂಜುನಾಥ ಭೋವಿ, ರಮೇಶ ಮೋಟೆಬೆನ್ನೂರ, ಖಾದರಸಾಬ ದೊಡ್ಡಮನಿ, ಯುನಸ್ಖಾನ್ ಸವಣೂರ, ರಾಜೇಸಾಬ ಕಳ್ಯಾಳ, ಪ್ರೇಮಾ ಅಂಗಡಿ, ಪ್ರಕಾಶ ಬಣಕಾರ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.