ತುಂಗಭದ್ರಾ ಎಡ-ಬಲದಂಡೆ ಕಾಲುವೆಗೆ ಸಮರ್ಕ ನೀರು ಹರಿಸಲು ಆಗ್ರಹ
ಕಂಪ್ಲಿ, ಆ.12: ತುಂಗಭದ್ರಾ ಜಲಾಶಯದಿಂದ ಬಲದಂಡೆಯ ಎಲ್‌ಎಲ್ಸಿ ಕಾಲುವೆಗೆ ಕರ್ನಾಟಕ ಮತ್ತು ಆಂಧ್ರ್ರದೇಶದ ಕೋಟಾದಡಿ ಜಂಟಿಯಾಗಿ ನೀರು ಹರಿಸಿದರೆ ಮಾತ್ರ ದೇವಸಮುದ್ರ ಎಂ.1 ಡಿಸ್ಟ್ರಿಬ್ಯೂಟರ್ ನಾಲೆಯ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರು ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ 24 ಗಂಟೆಯೊಳಗೆ ಎರಡೂ ರಾಜ್ಯಗಳ ಕೋಟಾದಡಿ ಸಮರ್ಕವಾಗಿ ನೀರು ಹರಿಸಬೇಕು. ಇಲ್ಲವಾದಲ್ಲಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಅಳ್ಳಳ್ಳಿ ವೀರೇಶ ಎಚ್ಚರಿಸಿದರು.
ತಾಲೂಕಿನ ದೇವಸಮುದ್ರ ಗ್ರಾಮದ ಎಲ್‌ಎಲ್ಸಿ ಕಾಲುವೆಯ ಎಂ.1 ಡಿಸ್ಟ್ರಿಬ್ಯೂಟರ್ ಬಳಿ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ನಡೆದ ಸಾಂಕೇತಿಕ ಹೋರಾಟದಲ್ಲಿ ಮಾತನಾಡಿದ ಅವರು, ಆ.11ರಂದು ಮುನಿರಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ನೀರಿನ ಹಂಚಿಕೆಯನ್ನು ಸಮರ್ಕವಾಗಿ ಮಾಡಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ನೀರು ಹಂಚಿಕೆ ಮಾಡಲಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಈ ವೇಳೆಗೆ ರೈತರ ಜಮೀನುಗಳಲ್ಲಿ ಭತ್ತದ ಬೆಳೆ ಬೆಳೆಯಬೇಕಾಗಿತ್ತು. ಆದರೆ ಜಲಾಶಯದಲ್ಲಿ ನೀರಿಲ್ಲ ಎಂಬ ಕಾರಣ ನೀಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದೀಗ ಬೇಕಾಬಿಟ್ಟಿಯಾಗಿ ನೀರು ಹಂಚಿಕೆ ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಎರಡೂ ರಾಜ್ಯಗಳ ಕೋಟಾದಡಿ ಜಂಟಿಯಾಗಿ ನೀರು ಹರಿಸಿದಾಗ ಮಾತ್ರ ಡಿಸ್ಟ್ರಿಬ್ಯೂಟರ್ಗಳಿಗೆ ನೀರು ತಲುಪಲಿದೆ. ಇಲ್ಲವಾದಲ್ಲಿ ರೈತರಿಗೆ ನೀರೇ ದೊರೆಯುವುದಿಲ್ಲ ಎಂದು ಹೇಳಿದರು.
ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಜನಪ್ರತಿನಿಧಿಗಳು ಅಗತ್ಯ ಕಾಳಜಿ ವಹಿಸುತ್ತಿಲ್ಲ. ಎರಡು ತಿಂಗಳ ನಂತರ ಭತ್ತ ಬಿತ್ತನೆ ಮಾಡಿದರೆ ಇಳುವರಿ ಬರುವುದಿಲ್ಲ. ಪ್ರಸ್ತುತ ಸುಮಾರು 600 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದರೂ, ಕಾಲುವೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಜಲಾಶಯ ಕರ್ನಾಟಕದಲ್ಲಿದ್ದರೂ ಆಂಧ್ರ ಸರ್ಕಾರ ಮತ್ತು ಅಧಿಕಾರಿಗಳ ಒತ್ತಡಕ್ಕೆ ಮಣಿದು ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಆಂಧ್ರದ ಒತ್ತಡದಿಂದಾಗಿ ನಮ್ಮ ರೈತರಿಗೆ ಸಮರ್ಕವಾಗಿ ನೀರು ಕಲ್ಪಿಸುತ್ತಿಲ್ಲ. ರೈತರು ಈಗಾಗಲೇ ರೊಚ್ಚಿಗೆದ್ದಿದ್ದು, ಕೂಡಲೇ 20 ಗಂಟೆಯೊಳಗೆ ಎಲ್‌ಎಲ್ಸಿ ಕಾಲುವೆಗೆ ಜಂಟಿಯಾಗಿ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯುವುದು ಶತಸಿದ್ಧ ಎಂದು ಅಳ್ಳಳ್ಳಿ ವೀರೇಶ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಡೇಮನೆ ಪಂಪಾಪತಿ, ಕಡೇಮನೆ ಮಂಜುನಾಥ, ಜಿ. ಚಂದ್ರಶೇಖರಗೌಡ, ಬಸವನಗೌಡ, ಅಮರೇಗೌಡ, ಜಿ. ಮಲ್ಲಿಗೌಡ, ಚನ್ನವೀರ, ಗಣೇಶಗೌಡ, ಎನ್. ಚಂದ್ರಕಾಂತರೆಡ್ಡಿ ಸೇರಿದಂತೆ ರೈತ ಮುಖಂಡರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.