ಜಿಲ್ಲೆಯನ್ನು ವಿಭಜಿಸಿ: ಹಳಿಯಾಳ ಜಿಲ್ಲಾ ಕೇಂದ್ರವಾಗಲಿ
ಕಾರವಾರ 06: ಉತ್ತರ ಕನ್ನಡ ಜಿಲ್ಲೆ ವಿಭಜಿಸಿ. ಆದರೆ ಹಳಿಯಾಳ ಕೇಂದ್ರವಾಗಿಸಿ ಎಂದು ಸರ್ಕಾರವನ್ನು ಬಿಜೆಪಿ ಮುಖಂಡ ರಾಜು ಧೂಳಿ ಆಗ್ರಹಿಸಿದರು .
ಕಾರವಾರದಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿ ಮಾಡಿದರು. ಹಳಿಯಾಳದಲ್ಲಿ ಭೂಮಿ, ನೀರು ಇದೆ. ಹಾಗಾಗಿ ಹಳಿಯಾಳ ಜಿಲ್ಲಾ ಕೇಂದ್ರ ವಾಗಲಿ ಎಂದರು. 16 ಸಾವಿರ ಎಕರೆ ಭೂಮಿಗೆ ನೀರು ಉಣಿಸುವಷ್ಟು ನೀರು ಕಾಳಿ ನದಿಯಲ್ಲಿದೆ. ಹಾಗಾಗಿ ಸಮೃದ್ಧ ಭೂಮಿ ಹಳಿಯಾಳ. ಇದು ಜಿಲ್ಲಾ ಕೇಂದ್ರವಾಗಬೇಕು ಎಂದರು, ಹಳಿಯಾಳ, ದಾಂಡೇಲಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ದಾಂಡೇಲಿ ಪೇಪರ್ ಮಿಲ್ ಬಳಸುವ ನೀರು ಕಾಳಿ ನದಿಯದ್ದೆ. ಆದರೆ ಕುಡಿಯುವ ನೀರಿನ ಜಾಕ್ವೆಲ್ ಪೇಪರ್ ಮಿಲ್ ಮೇಲ್ಭಾಗದಲ್ಲಿದೆ. ಕುಡಿಯಲು ಶುದ್ಧ ನೀರು ಸಿಗುತ್ತದೆ ಎಂದರು. ಜೊಯಿಡಾ, ದಾಂಡೇಲಿ, ಹಳಿಯಾಳ, ಮುಂಡಗೋಡ, ಯಲ್ಲಾಪುರಗಳು ಹಳಿಯಾಳಕ್ಕೆ ಹತ್ತಿರ ಇವೆ. ಹಾಗಾಗಿ ಹಳಿಯಾಳ ಜಿಲ್ಲಾ ಕೇಂದ್ರವಾಗಬೇಕು ಎಂದರು. ಹಳಿಯಾಳ ಜಿಲ್ಲೆಗೆ ಉಳವಿ ಜಿಲ್ಲೆಯೆಂದು ನಾಮಕರಣ ಮಾಡಬೇಕು, ಉಳವಿ ಶರಣರ ನಡೆದಾಡಿದ ನಾಡು. ಹಾಗಾಗಿ ಉಳವಿ ಜಿಲ್ಲೆ ಎಂಬ ಹೆಸರು ಸರಿಯಾದುದು ಎಂದರು, ಶಿರಸಿ, ಸಿದ್ದಾಪುರ, ಮುಂಡಗೋಡದವರು ಸೇರಿಕೊಂಡು ಶಿರಸಿ ಜಿಲ್ಲೆಯ ಬೇಡಿಕೆ ಇಟ್ಟಿದ್ದಾರೆ. ಯಲ್ಲಾಪುರದವರು ಪ್ರತ್ಯೇಕ ತಮಗೆ ಜಿಲ್ಲಾ ಕೇಂದ್ರ ಬೇಕು ಎನ್ನುತ್ತಿದ್ದಾರೆ, ಆದರೆ ಹಳಿಯಾಳ ಜಿಲ್ಲಾ ಹೋರಾಟ ಸಮಿತಿ ಪ್ರಕಾರ ಹಳಿಯಾಳ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಸ್ಥಳ ಎಂದು ರಾಜು ಧೂಳಿ ಹೇಳಿದರು. ಸಿ.ಡಿ.ಗಂಗಾಧರ ಅವರು ಮಾತನಾಡಿ ಹಳಿಯಾಳ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಸ್ಥಳ. ನಮಗೆ ಕಾರವಾರ ತುಂಬಾ ದೂರವಾಗುತ್ತದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿ, ಎಸ್ಪಿ ಹತ್ತಿರದಲ್ಲಿರಬೇಕು ಎಂದರು. ಜಿಲ್ಲೆ ತುಂಬಾ ದೊಡ್ಡದಿದೆ. 12 ತಾಲೂಕುಗಳಿವೆ. ಹಾಗಾಗಿ ಜಿಲ್ಲಾ ವಿಭಜನೆಗೆ ಸರ್ಕಾರ ಮೊದಲ ಆದ್ಯತೆ ಕೊಡಬೇಕು ಎಂದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜು ಧೂಳಿ ಶಿರಸಿ , ಯಲ್ಲಾಪುರವನ್ನು ಜಿಲ್ಲಾ ಕೇಂದ್ರವಾಗಿಸಿದರೂ ನಾವು ಸ್ವಾಗತಿಸುತ್ತೇವೆ, ಆದರೆ ಜಿಲ್ಲೆ ವಿಭಜನೆಗೆ ಅತ್ಯಂತ ಸೂಕ್ತ ಕಾಲ ಇದು. ಈ ಸಂಬಂಧ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರರಿಗೆ ಸಹ ನೀಡುತ್ತೇವೆ. ಸರ್ಕಾರ ನಮ್ಮದೇ ಇದೆ, ಅದಷ್ಟು ಬೇಗ ಜಿಲ್ಲೆಯನ್ನು ವಿಭಜಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಧೂಳಿ ಮನವಿ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಬಸವರಾಜ ಬೆಂಡಿಗೇರಿಮಠ, ಸಿ.ಡಿ.ಗಂಗಾಧರ, ರಾಘವೇಂದ್ರ ಆನೆಗುಂದಿ, ಮಧುರಾ ಬಡಗೇರ, ಬಸವರಾಜ ಪಾಟೀಲ ,ಚಂದ್ರಶೇಖರ ಇದ್ದರು.