ಅಥಣಿ

ಗಡಿ ಭಾಗದ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ : ದೇವೇಂದ್ರ ಬಿಸ್ವಾಗರ ಒತ್ತಾಯ

ಗಡಿ ಭಾಗದ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ  : ದೇವೇಂದ್ರ ಬಿಸ್ವಾಗರ ಒತ್ತಾಯ

ಲೋಕದರ್ಶನ ವರದಿ 


ಅಥಣಿ 01: ಕರ್ನಾಟಕ ಗಡಿ ಭಾಗದ ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಅಥಣಿ ಜಿಲ್ಲಾ ಹೋರಾಟ ಸಮೀತಿಯ ದೇವೇಂದ್ರ ಬಿಸ್ವಾಗರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.  

ಅವರು ಸ್ಥಳೀಯ ಶೆಟ್ಟರ ಮಠದಲ್ಲಿ ಹೋರಾಟ ಸಮಿತಿಯಿಂದ ಪತ್ರ ಚಳುವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

      ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕಕ್ಕೆ ಕಿತ್ತೂರ ಕರ್ನಾಟಕ ಎಂದು ನಾಮ ಕರಣ ಮಾಡಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆಯ ಕಟ್ಟಕಡೆಯ ತಾಲೂಕು ಅಥಣಿ ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಜಿಲ್ಲಾ ಕೇಂದ್ರವಾದಾಗ ಮಾತ್ರ ಶೈಕ್ಷಣಿಕ, ಕೃಷಿ, ನೀರಾವರಿ, ಸಾರಿಗೆ, ವಾಣಿಜ್ಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗಲು ಸಾಧ್ಯವಾಗುವುದು ಎಂದ ಅವರು ಮೊದಲಿನ ಸರಕಾರಗಳು ನೇಮಕ ಮಾಡಿದ ಎಲ್ಲ ಆಯೋಗಗಳು ಕಿತ್ತೂರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಧಿಕಾರ ವಿಕೇಂದ್ರಿಕರಣ ಆಗಬೇಕು ಎಂದು ತಮ್ಮ ತಮ್ಮ ವರದಿ ನೀಡಿವೆ ಆದರೂ ಕೂಡ ಇಲ್ಲಿಯವರೆಗೆ ಆ ಆಯೋಗಗಳ ವರದಿ ಅನುಷ್ಠಾನಗೊಂಡಿಲ್ಲ ಎಂದರು.  

     ಹೋರಾಟ ಸಮೀತಿ ಸದಸ್ಯ ಇಂಜನೀಯರ್ ಅರುಣ ಯಲಗುದ್ರಿ ಮಾತನಾಡಿ, ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನು ಅಥಣಿ ಹೊಂದಿದೆ. ಅವಿಭಜಿತ ಅಥಣಿ ತಾಲೂಕು 2070 ಚದರ ಕಿಲೋ ಮೀಟರ್ ಗಳಷ್ಟಿದ್ದು, ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಷ್ಟು ಅಳತೆಯಲ್ಲಿದೆ ಆದರೂ ಕೂಡ ಇಲ್ಲಿಯವರೆಗೂ ಅಥಣಿ ಜಿಲ್ಲೆಗೆ ರಾಜ್ಯ ಸರಕಾರ ಮನಸ್ಸು ಮಾಡದೇ ಇದ್ದುದು ವಿಷಾದಕರ ಸಂಗತಿಯಾಗಿದೆ ಎಂದರು. ಮೈಸೂರು ಕರ್ನಾಟಕದಲ್ಲಿ ಪ್ರತಿ 40 ಕಿಲೋ ಮೀಟರ್ ಗೆ ಒಂದು ಜಿಲ್ಲಾ ಕೇಂದ್ರ ಬರುತ್ತದೆ ಆದರೆ ಇಲ್ಲಿ ಮಾತ್ರ ಅಥಣಿ ಜಿಲ್ಲಾ ಕೇಂದ್ರದಿಂದ 150 ಕಿ.ಮಿ ಹಾಗೂ ಅಥಣಿಯ ಕಟ್ಟಕಡೆಯ ಗ್ರಾಮ ತೆಲಸಂಗದಿಂದ 225 ಕ್ಕೂ ಹೆಚ್ಚು ಕಿ.ಮಿ ದೂರದಲ್ಲಿದೆ ಇಲ್ಲಿಯ ಜನ ಬೆಳಗಾವಿಗೆ ಹೋಗಿ ಬರಲು ಕನಿಷ್ಠ ಒಂದು ದಿನವಾದರೂ ಬೇಕಾಗುತ್ತದೆ ಎಂದ ಅವರು ಪ್ರಾದೇಶಿಕ ಅಸಮತೋಲನ ನಿಗಿಸಲು ಮತ್ತು ಆಡಳಿತಾತ್ಮಕ ಅನಕೂಲಕ್ಕಾಗಿ ಜಿಲ್ಲೆಯನ್ನು ವಿಭಜಿಸಬೇಕು ಎಂದು ಆಗ್ರಹಿಸಿದರು.  

    ಬೆಳಗಾವಿ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಈಗಾಗಲೇ ಸರಕಾರದ ಮಟ್ಟದಲ್ಲಿ ಚಿಕ್ಕೋಡಿ ಜಿಲ್ಲೆ ಮಾಡಬೇಕು ಎಂದು ಪ್ರಸ್ತಾವನೆ ಇದೆ ಇದರ ಬೆನ್ನಲ್ಲೆ ಗೋಕಾಕನ್ನೂ ಕೂಡ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆ ಭಾಗದ ಜನತೆಯ ಕೂಗೂ ಆಗಿದೆ ಇದ್ಯಾವುದಕ್ಕೂ ನಮ್ಮ ವಿರೋಧ ಇಲ್ಲ ಜಿಲ್ಲೆಯ ವಿಸ್ತಿರ್ಣ ಗಮನಿಸಿದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಗಳಾಗಿ ವಿಭಜಿಸಲು ಸಾಧ್ಯ ಇದೆ ಎಂದ ಅವರು ಹಿಂದೊಮ್ಮೆ ಬೆಳಗಾವಿಯನ್ನು ವಿಭಜಿಸಿದಲ್ಲಿ ಮರಾಠಿಗರ ಪ್ರಾಭಲ್ಯ ಹೆಚ್ಚಾಗುವ ಸಾಧ್ಯತೆ ಇತ್ತು ಹೀಗಾಗಿಯೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬಾರದು ಎನ್ನುವ ಕೂಗು ಕನ್ನಡ ಹೋರಾಟಗಾರರದ್ದಾಗಿತ್ತು ಈಗ ಇದು ಸಾಧ್ಯ ಇಲ್ಲ ಹೆಚ್ಚು ಜಿಲ್ಲೆಗಳಾದಷ್ಟು ಗಡಿ ಗಡಿ ಗಟ್ಟಿಯಾಗುತ್ತದೆ ಹೀಗಾಗಿ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿ ಚಳಿಗಾಲದ ಅಧಿವೇಶನದಲ್ಲಿಯೇ ಘೋಷಿಸಬೇಕು ಎಂದು ಆಗ್ರಹಿಸಿದರು.  

    ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಮಾತನಾಡಿ, ಶೈಕ್ಷಣಿಕ, ಓದ್ಯೋಗಿಕ, ವಾಣಿಜ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಅಥಣಿ ತೀರ ಹಿಂದೂಳಿದ ತಾಲೂಕು ಆಗಿದೆ. ಅಥಣಿ ಹಾಗೂ ಅಥಣಿ ಜಿಲ್ಲೆಯ ವ್ಯಾಪ್ತಿಗೆ ತರಬಹುದಾದ ರಾಯಬಾಗ, ಹಾರೂಗೇರಿ, ಕಾಗವಾಡ ಸೇರಿದಂತೆ ಅಥಣಿ ತಾಲೂಕಿನಲ್ಲಿ ದೊಡ್ಡ ಗ್ರಾಮಗಳಾದ ಅನಂತಪೂರ, ತೆಲಸಂಗ ಹೊಬಳಿಗಳನ್ನು ತಾಲೂಕಾ ಕೇಂದ್ರಗಳನ್ನಾಗಿ ಮಾಡಿದಲ್ಲಿ ಈ ಪ್ರದೇಶ ಅಭಿವೃದ್ಧಿಯಾಗುವುದು ಎಂದ ಅವರು ಇದರ ಜೊತೆಗೆ  ಈ ಭಾಗದಲ್ಲಿ ಶೈಕ್ಷಣಿಕ, ಓದ್ಯೋಗಿಕ ಕ್ರಾಂತಿಯಾಗುವುದು ನಿಶ್ಚಿತ ಎಂದರು.  

    ಅಥಣಿಗೆ ಜಿಲ್ಲೆಗೆ ಆಗ್ರಹಿಸಿ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಸಾವಿರಾರು ಸಂಖ್ಯೆಯಲ್ಲಿ ಪತ್ರಗಳನ್ನು ಬರೆಯುವದರ ಮೂಲಕ ಪತ್ರ ಚಳುವಳಿ ಪ್ರಾರಂಭಿಸಿದ್ದೇವೆ ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಶಾಂತ ತೋಡಕರ ಮನವಿ ಮಾಡಿದರು.  

    ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು. ಪುಟ್ಟು ಹಿರೇಮಠ, ವಿನಯ ಪಾಟೀಲ, ಸಚೀನ ಅವಟಿ, ಪಿಂಟು ಪೂಜಾರಿ ಉಪಸ್ಥಿತರಿದ್ದರು. 


ಸುದ್ದಿ ಓದಿ