ಅಥಣಿ

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ನಿರ್ಧಾರ: ರಮೇಶ ಜಾರಕಿಹೊಳಿ

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ನಿರ್ಧಾರ: ರಮೇಶ ಜಾರಕಿಹೊಳಿ

ಲೋಕದರ್ಶನ ವರದಿ 


ಅಥಣಿ 02: ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತ ಯಾರಿಗೆ ಹಾಗೂ ದ್ವಿತೀಯ ಪ್ರಾಶಸ್ತ್ಯ ಮತ ಯಾರಿಗೆ ಕೊಡಬೇಕು ಎನ್ನುವುದು ಈಗಲೇ ಹೇಳುವುದಿಲ್ಲ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ನಿರ್ಧಾರ ಮಾಡಿ ಇನ್ನೆರಡು ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.  

ಅವರು ಸ್ಥಳೀಯ ನೂರಾನಿ ಸಭಾಗೃಹದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಆಯೋಜಿಸಿದ್ದ ಗ್ರಾಮ ಪಂಚಾಯತ ಸದಸ್ಯರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.  

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತನಾಡಿ, ಪಕ್ಷೇತರನಾಗಿ ಸ್ವರ್ಧಿಸಿದ ನನಗೆ ಅನೇಕರು ಬೇರೆ ಬೇರೆ ಪಕ್ಷದಲ್ಲಿದ್ದರೂ ಜಾರಕಿಹೊಳಿ ಕುಟುಂಬದ ಅಭಿಮಾನದಿಂದ ಬೆಂಬಲ ನೀಡುತ್ತಿದ್ದಾರೆ ಒಂದು ವೇಳೆ ನಾನು ಯಾವುದಾದರೊಂದು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಅವರ ಬೆಂಬಲ ನನಗೆ ಸಿಗುವುದು ಕಷ್ಟಕರವಾಗುತ್ತಿತ್ತು ಹೀಗಾಗಿಯೇ ನಾನು ಯಾವ ಪಕ್ಷದ ಟಿಕೆಟ್ ಕೇಳದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ ಎಂದು ಸ್ಪಷ್ಟಪಡಿಸಿದರು.  

       ಕೊಕಟನೂರ ಜಿಲ್ಲಾ ಪಂಚಾಯತ ಕ್ಷೇತ್ರದ ಮಾಜಿ ಸದಸ್ಯ ಎಸ್‌.ಎ.ಮುದಕಣ್ಣವರ ಮಾತನಾಡಿ, ಪ್ರಥಮ ಪ್ರಾಶಸ್ತ್ಯ ಮತವನ್ನು ಲಖನ್ ಜಾರಕಿಹೊಳಿಗೆ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇವರಿಗೆ ನೀಡಿ ಎಂದು ಮನವಿ ಮಾಡಿದರು.  

      ಸಮಾವೇಶದಲ್ಲಿ ರಮೇಶ ಪಾಟೀಲ (ನಂದೇಶ್ವರ), ಉತ್ತಮ ಪಾಟೀಲ, ಮಹಾದೇವ ಕೋರೆ, ದಾದಾ ಶಿಂಧೆ, ರಾವಸಾಹೇಬ ಬೆವನೂರ, ಎ.ಸಿ.ಪಾಟೀಲ, ಮಾತನಾಡಿದರು. ಸಮಾವೇಶದ ನೇತೃತ್ವನ್ನು ಮಾಜಿ ಜಿ.ಪಂ ಸದಸ್ಯ ಸುರೇಶ ಮಾಯಣ್ಣವರ, ಅಪ್ಪಾಸಾಹೇಬ ಅವತಾಡೆ, ಅಮೂಲ ನಾಯಿಕ, ನಿಂಗಪ್ಪ ನಂದೇಶ್ವರ, ಮಲ್ಲಿಕಾರ್ಜುನ ಅಂದಾನಿ ವಹಿಸಿದ್ದರು.  

     ಸಮಾವೇಶದ ಪ್ರಾರಂಭದಲ್ಲಿ ರಮೇಶ ಜಾರಕಿಹೊಳಿ ಒಬ್ಬರೇ ಕಾರ್ಯಕ್ರಮಕ್ಕೆ ಆಗಮಿಸಿ ಅಚ್ಚರಿ ಮೂಡಿಸುವಂತೆ ಮಾತನಾಡಿ ವೇದಿಕೆಯಿಂದ ತೆರಳಿದ ಕೆಲ ನಿಮೀಷಗಳ ನಂತರ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ವೇದಿಕೆಗೆ ಆಗಮಿಸಿ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು. 


ಸುದ್ದಿ ಓದಿ