ಅಥಣಿ

ದರೂರ ಗ್ರಾಮದ ಮತದಾರರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ: ಸವದಿ

ದರೂರ ಗ್ರಾಮದ ಮತದಾರರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ: ಸವದಿ

ಅಥಣಿ 24: ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಅತೀ ಹೆಚ್ಚು ಮತಗಳನ್ನು ನೀಡಿ ನನ್ನ ಗೆಲುವಿಗೆ ಸಹಕಾರ ನೀಡಿದ ದರೂರ ಗ್ರಾಮದ ಮತದಾರರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯ ಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ದರೂರ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆ, ಗ್ರಾಮ ಪಂಚಾಯತದಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.  

     ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದಾಗ ನನ್ನನ್ನು ಸೋಲಿಸಲು ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರನ್ನು ಕರೆಯಿಸಿ ಪಣ ತೊಟ್ಟಿದ್ದರು. ಆದರೆ ಕ್ಷೇತ್ರದ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡಿದ ಪರಿಣಾಮ ದಾಖಲೆ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು ಎಂದ ಅವರು ಇದೇ ಮೊದಲ ಬಾರಿಗೆ ದರೂರ ಗ್ರಾಮದ ಮತದಾರರು 1723 ಹೆಚ್ಚುವರಿ ಮತಗಳನ್ನು ನನ್ನ ಮೇಲೆ ವಿಶ್ವಾಸ ಇಟ್ಟು ಕೊಟ್ಟಿದ್ದಾರೆ ಎಂದರು.  

       ಹಿಂದಿನ ಶಾಸಕರು 5ವರ್ಷಗಳ ಅವಧಿಯಲ್ಲಿ ಒಂದೇ ಒಂದು ತ್ರೈಮಾಸಿಕ ಸಭೆ ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ನಡೆಯಲೇ ಇಲ್ಲ. ಹೀಗಾಗಿ ಸರಕಾರಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ ಎಂದ ಅವರು ನಾನು ಚುನಾವಣೆಯಲ್ಲಿ ಆಯ್ಕೆಯಾದ ದಿನದಿಂದಲೇ ಆಡಳಿತ ಯಂತ್ರ ಸರಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವೆ ಜೊತೆಗೆ  ಕಳೆದ ತಿಂಗಳಲ್ಲಿಯೇ ಮೊದಲ ತ್ರೈಮಾಸಿಕ ಸಭೆ ಕೂಡ ನಡೆಸಿರುವೆ ಎಂದ ಅವರು ಸರಕಾರಿ ಕಛೇರಿಗಳಲ್ಲಿ ನ್ಯಾಯಯುತ ಸರಕಾರಿ ಕೆಲಸಗಳಿಗೆ ಸರಕಾರಿ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಅಡತಡೆ ಮಾಡಿದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು.  

      ದರೂರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ ಸದಸ್ಯರು ಮಾಡಿದ ಮನವಿಗೆ ನಾನು ಹಂತ ಹಂತವಾಗಿ ಸ್ಪಂದಿಸುವೆ ಎಂದರು. ಗ್ರಾಮದಲ್ಲಿ ತುರ್ತಾಗಿ ಅನುಷ್ಠಾನಗೊಳ್ಳಬೇಕಿದ್ದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿ ಆ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡುವೆ ಎಂದರು.  

      ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ದರೂರ ಗ್ರಾಮ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ ಆದರೆ 2004ರ ವರೆಗೆ ದರೂರ ಜಿ.ಪಂ ಕ್ಷೇತ್ರ ಕಾಗವಾಡ ಮತಕ್ಷೇತ್ರಕ್ಕೆ ಬರುತ್ತಿತ್ತು. ಹೀಗಾಗಿ ದರೂರ ಗ್ರಾಮದ ಜೊತೆಗೆ ನನಗೆ ಒಳ್ಳೆಯ ಸೌಹಾರ್ದ ಸಂಬಂಧ ಹೊಂದಿರುವೆ ಎಂದರು.  

     ದರೂರ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಇದೇ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ನನ್ನನ್ನು ನಿಮ್ಮ ಜೊತೆಗೆ ಕೊಂಡೊಯ್ಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಇವರಲ್ಲಿ ಮನವಿ ಮಾಡಿದರು.  

        ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುರೇಶ ಮಾಯಣ್ಣವರ ಮಾತನಾಡಿ, ದರೂರ ಗ್ರಾಮದ ಮತದಾರರು ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಇವರಿಗೆ ಶೇ.80 ರಷ್ಟು ಮತದಾರರು ಬೆಂಬಲಿಸಿದ್ದು, ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಎಂದು ಮನವಿ ಮಾಡಿದರು.  

      ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಶ್ರೀಕಾಂತ ಅಸ್ಕಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾದೇವ ಬಸಗೌಡರ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಚತೆಯನ್ನು ದರೂರ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಕಾಂಬಳೆ ವಹಿಸಿದ್ದರು. ಸಂಜೀವ ಕಾಂಬಳೆ ನಿರೂಪಿಸಿ ವಂದಿಸಿದರು.  

     ಇದಕ್ಕೂ ಮೊದಲು ಶಾಸಕ ಲಕ್ಷ್ಮಣ ಸವದಿ ಇವರನ್ನು ಜೋಡು ಟಗರಿನ ಗಾಡಿಯಲ್ಲಿ ನಿಲ್ಲಿಸಿ ಮಹಿಳಾ ಝಾಂಚ ಪಥಕ್ ದೊಂದಿಗೆ ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಲಕ್ಚ್ಮಣ ಸವದಿ ಪರವಾಗಿ ಜಯಘೋಷ ಕೂಗಿದರು. 


ಸುದ್ದಿ ಓದಿ