ವಲಯಮಟ್ಟದ ಕ್ರೀಡಾಕೂಟ ವೀಕ್ಷಿಸಲು ಬಂದ ದಲಿತ ಸಮುದಾಯದ ಯುವಕರಿಗೆ ಪ್ರವೇಶ ನೀಡದೆ ಹಲ್ಲೆ: ಖಂಡನೀಯ
ಜಮಖಂಡಿ 13: ತಾಲೂಕಿನ ಮೈಗೂರ ಗ್ರಾಮದ ಮಠದ ಆವರಣಕ್ಕೆ ದಲಿತರನ್ನು ಪ್ರವೇಶ ನಿರಾಕರಣೆ ಮಾಡಿ ಹಲ್ಲೆ ಎಸಗಿರುವ ಗುರುಪ್ರಸಾದ ಸ್ವಾಮಿ ಹಾಗೂ ಸಹಚರರ ಮೇಲೆ ಎಪ್ಐಆರ್ ದಾಖಲೆ ಮಾಡಬೇಕು ಇಲ್ಲದಿದ್ದರೆ ಜಮಖಂಡಿ ಬಂದ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಎಚ್ಚರಿಕೆ ನೀಡಿದ್ದಾರೆ.
ಮೈಗೂರ ಗ್ರಾಮದ ಶಿವಾನಂದ ಮಠದ ಆವರಣದಲ್ಲಿ ಸೆ.6 ರಂದು ನಡೆದ ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ ವೀಕ್ಷಿಸಲು ಬಂದ ದಲಿತ ಸಮುದಾಯದ ಸಂಜು ಕಾಂಬಳೆ, ಸೇರಿದಂತೆ ಸಂಗಡಿಗರಿಗೆ ಪ್ರವೇಶ ನೀಡದೆ ಹಲ್ಲೆ ನಡೆಸಿ ಜಾತಿತಾರತಮ್ಯ ಮಾಡಿದ್ದು ಖಂಡನೀಯ.
ಸ್ವಾಮಿ ಹಾಗೂ ಸಹಚರರು ನಡೆಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದಲಿತರನ್ನು ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ, ದಲಿತರ ಮಕ್ಕಳಿಗೆ ಶಾಲಾ ದಾಖಲಾತಿ ಕೊಟ್ಟಿಲ್ಲ, ಶಾಲಾ ಕಾರ್ಯಕ್ರಗಳಲ್ಲಿ ಗ್ರಾಮದ ದಲಿತ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸರ್ಕಾರಿ ಶಿಷ್ಟಾಚಾರ ಪಾಲನೆ ಉಲ್ಲಂಘಣೆ ಮಾಡಿ ಉದ್ದಟನದಿಂದ ವರ್ತಿಸುತಿದ್ದಾರೆ ಅಧಿಕಾರಿಗಳು ಈ ಶಾಲೆಯ ಪರವಾಣಿಗೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ಸಂಸ್ಥೆಯನ್ನು ಬೆಳೆಸಬೇಕು ಎಂದು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ನ್ನು ಮುಚ್ಚಿಸಬೇಕು ಮತ್ತು ಬೆಳೆಯಬಾರದು ಎಂದು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ದಲಿತ ಯುವಕರು ಸ್ವಾಮಿ ಹಾಗೂ ಸಹಚರರ ವಿರುದ್ದ ಪ್ರತಿಭಟಿಸಿದರು. ಅವರ ಪ್ರತಿಭಟನೆ ಹತ್ತಿಕ್ಕಿ, ತಾಲೂಕಾಡಳಿತ ದಲಿತ ವಿರೊಧಿ ಸ್ವಾಮಿ ಹಾಗೂ ಸಹಚರರ ಪರವಾಗಿ ನಿಂತಿದ್ದು ಸಂಶಯಾಸ್ಪದಕ್ಕೆ ಎಡೆಮಾಡಿದೆ.
ಅಧಿಕಾರಿಗಳ ನಡೆ ದಲಿತ ವಿರೋಧಿಯಂತೆ ಮೆಲ್ನೋಟಕ್ಕೆ ಸಾಬಿತಾಗಿದ್ದು ತಪ್ಪಿತಸ್ಥ ದಲಿತವಿರೋಧಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಒಂದು ವಾರದಲ್ಲಿ ಸ್ವಾಮಿ ಹಾಗೂ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸದೆ ಹೋದರೆ ತಾಲೂಕಿನ ದಲಿತ ವಿವಿಧ ಒಕ್ಕೂಟಗಳಿಂದ ಜಮಖಂಡಿ ಬಂದ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಶ್ಯಾಮರಾವ ಘಾಟಗೆ, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿದ್ದು ಮೀಶಿ, ದಸಂಸ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ, ದಲಿತ ದುರೀಣ ರವಿ ಬಬಲೇಶ್ವರ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.