ಮನರಂಜನೆ

ಅಣ್ಣಾವ್ರ ಕುಟುಂಬದ ದಿನದರ್ಶಿ ಬಿಡುಗಡೆ

ಅಣ್ಣಾವ್ರ ಕುಟುಂಬದ  ದಿನದರ್ಶಿ ಬಿಡುಗಡೆ

ಬೆಂಗಳೂರು, ಜ 21:ಚಲನಚಿತ್ರರಂಗ ಎಂದೆಂದಿಗೂ ಸ್ಮರಿಸುವ ಪದ್ಮಭೂಷಣ ಡಾ ರಾಜ್ ಕುಮಾರ್ ಕುಟುಂಬದ ದಿನದರ್ಶಿ ಬಿಡುಗಡೆಯಾಗಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರು ದಿನದರ್ಶಿ ಬಿಡುಗಡೆಗೊಳಿಸಿ ಮಾತನಾಡಿ, 2020 ದುರದೃಷ್ಟದ ವರ್ಷ ಎಂದು ಬೇಸರ ವ್ಯಕ್ತಪಡಿಸಿದರು.  ನಂತರ, ಡಾ.ರಾಜ್‌ಕುಮಾರ್ ಕುಟುಂಬದ 2021ನೇ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದ್ದು ಮೊದಲ ಪುಣ್ಯದ ಕೆಲಸ. ಅಣ್ಣಾವ್ರು ನಟಿಸಿರುವ ’ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಕೃಷ್ಣನ ಅವತಾರದಲ್ಲಿರುವ ಭಾವಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವು ಕ್ಯಾಲೆಂಡರ್ ಬಿಡುಗಡೆ ಮಾಡಿ” ಎಂದು ಹೇಳಿದರು. ಒಟ್ಟು ಹನ್ನೆರಡು ತಿಂಗಳ ಪುಟಗಳಲ್ಲಿ ಡಾ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಪಾರ್ವತಮ್ಮರಾಜ್‌ಕುಮಾರ್ ಅವರನ್ನು ಡಾ ರಾಜ್ ಕ್ಯಾಮರಾದಲ್ಲಿ ಕ್ಲಿಕ್ ಮಾಡುತ್ತಿರುವುದು, ಚಿ.ಉದಯಶಂಕರ್ ಅವರೊಂದಿಗೆ ಮಾತನಾಡುತ್ತಿವುದು, ಹ್ಯಾಟ್ರಿಕ್ ಹೀರೋ ಅಮ್ಮನಿಗೆ ಸಿಹಿ ತಿನ್ನಿಸುವಾಗ ಡಾ.ರಾಜ್ ನೋಡುತ್ತಿರುವುದು. ’ದಾರಿ ತಪ್ಪಿದ ಮಗ’ ಚಿತ್ರದ ಸ್ಟಿಲ್ ಸೇರಿದಂತೆ ಆಕರ್ಷಕ ಭಾವಚಿತ್ರಗಳಿವೆ. ’ಅಖಿಲ ಕರ್ನಾಟಕ ಡಾ.ಶಿವರಾಜ್‌ಕುಮಾರ್ ಸೇನಾ ಸಮಿತಿ’ ನೂತನ ವರ್ಷದ ಕ್ಯಾಲೆಂಡರ್‌ನ್ನು ಸಿದ್ದಪಡಿಸಿದೆ. 

  


ಸುದ್ದಿ ಓದಿ