ಗಂಗಾವತಿ

ಡಿಕೆಶಿ, ಸಿದ್ದರಾಮಯ್ಯ ಪರ್ಸಂಟೇಜ್ ಗಿರಾಕಿಗಳು:ಮಾಜಿ ಶಾಸಕ ಪರಣ್ಣ ಮುನವಳ್ಳಿ ಲೇವಡಿ

ಡಿಕೆಶಿ, ಸಿದ್ದರಾಮಯ್ಯ  ಪರ್ಸಂಟೇಜ್ ಗಿರಾಕಿಗಳು:ಮಾಜಿ ಶಾಸಕ ಪರಣ್ಣ ಮುನವಳ್ಳಿ ಲೇವಡಿ

ಗಂಗಾವತಿ 17:ಮುಂಬರುವ ಲೋಕಸಭಾ ಚುನಾವಣೆ ನಂತರ ರಾಜ್ಯ ಸರಕಾರ ಪತನಗೊಳ್ಳಲಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು. ಬಿಜೆಪಿಯಿಂದ ಮಂಗಳವಾರ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರುಗಳು ಪರ್ಸಂಟೇಜ ಗಿರಾಕಿಗಳು ಎಂದು ಲೇವಡಿ ಮಾಡಿದರು. 

ಪಂಚರಾಜ್ಯ ಚುನಾವಣೆಗಾಗಿ ರಾಜ್ಯ ಸರಕಾರ ಕೋಟಿ, ಕೋಟಿ ಲೂಟಿ ಮಾಡುತ್ತಿದೆ. ಇಲ್ಲಿ ಸಂಗ್ರಹಗೊಂಡ ಹಣ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ತಲುಪುತ್ತದೆ. ಬೆಂಗಳೂರಿನ ಅಂಬಿಕಾಪತಿ ಎಂಬುವವರ ಮನೆಯಲ್ಲಿ 42 ಕೋಟಿ ನಗದು ಮತ್ತು ರಾಜಾಜಿನಗರದ ಸಂತೋಷ ಎಂಬುವವರ ಪ್ಲಾಟಿನಲ್ಲಿ 40 ಕೋಟಿಗೂ ಅಧಿಕ ಹಣವನ್ನು ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ಹಣ ಮನೆಯಲ್ಲಿ ಇಟ್ಟುಕೊಳ್ಳಲು ಅವಕಾಶ ಇಲ್ಲ. ಈ ಹಣ ಕಾಂಗ್ರೆಸ್ ಪಕ್ಷಕ್ಕಾಗಿ ಕಲೆಕ್ಷನ್ ಮಾಡಿದ್ದಾಗಿದೆ  ಇದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಮುನವಳ್ಳಿ ಆರೋಪಿಸಿದರು 

ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ ಡಿಕೆಶಿ ಮತ್ತು ಸಿದ್ದರಾಮಯ್ಯ ಕೂಡಿಕೊಂಡು ರಾಜ್ಯವನು ಲೂಟಿ ಮಾಡುತ್ತಿದ್ದಾರೆ. ಅಭಿವೃದ್ದಿ ಕಾಮಗಾರಿಗೆ ಹಣ ಇಲ್ಲ. ಕೆಲ ದಿನಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವದಿಲ್ಲ ಎಂದು ಭವಿಷ್ಯ ನುಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರರಿಗೆ  ಮನವಿ ಸಲ್ಲಿಸಿದರು. 


ಸುದ್ದಿ ಓದಿ