ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ
ಮುಂಡಗೋಡ 29: ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ವಿಶೇಷ ನ್ಯಾಯಾಲಯ 50 ಸಾವಿರ ರೂಪಾಯಿ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿದೆ.
ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಗಂಗಯ್ಯ ಸುರಗಿಮಠ ಎಂಬುವವನೇ ಶಿಕ್ಷೆಗೊಳಗಾದವನು. 2015 ಡಿಸೆಂಬರ್ 4ರಂದು ಪತ್ನಿ ಅಕ್ಕಮ್ಮ ಅವರ ಶೀಲ ಶಂಕಿಸಿ ಆಕೆಯನ್ನು ಒಣಕೆಯಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಸಲ್ಲಿಸಿದ ದೋಷಾರೋಪಣಾ ಪತ್ರವನ್ನು ಸ್ವೀಕರಿಸಿದ ನ್ಯಾಯಾಲಯ ಸುದೀರ್ಗ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪು ನೀಡಿದ್ದು, ಸರ್ಕಾರದ ಪರವಾಗಿ ಅಭೀಯೋಜಕ ಸುನಂದಾ ಮಡಿವಾಳ ವಾದ ಮಂಡಿಸಿದ್ದಾರೆ.