ಕೆಲಸದ ಮಧ್ಯೆ ಮನೋಲ್ಲಾಸಕ್ಕೆ ಕ್ರಿಕೆಟ್ ಅವಶ್ಯ: ಶಾಸಕಿ ರೂಪಾಲಿ ನಾಯ್ಕ
ಕಾರವಾರ 10: ವರ್ಷವಿಡೀ ಜನಪರ ಸುದ್ದಿಗಳನ್ನು ಮಾಡುತ್ತ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪತ್ರಕರ್ತರು ಶ್ರಮಿಸುತ್ತಾರೆ. ಅವರ ಕೆಲಸದ ನಡುವೆ ಮನೋಲ್ಲಾಸಕ್ಕೆ ಕ್ರಿಕೆಟ್ನಂತಹ ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು. ನಗರದ ಮಾಲಾದೇವಿ ಮೈದಾನದಲ್ಲಿ ಶನಿವಾರ ‘ಮೀಡಿಯಾ ಕಪ್ 2021’ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊದಲ ಪಂದ್ಯದಲ್ಲಿ ಕಾರವಾರ ಫೈಟರ್ಸ ಹಾಗೂ ಹೊನ್ನಾವರ ಹಂಟರ್ಸ ಮಧ್ಯೆ ನಡೆಯಿತು. ಹತ್ತು ಓವರ್ ಗಳ ಈ ಪಂದ್ಯದಲ್ಲಿ ಕಾರವಾರ ಫೈಟರ್ಸ ವಿಜೇತರಾದರು .
ಎರಡನೇ ಪಂದ್ಯ ಅಂಕೋಲಾ ಲಗಾನ್ ತಂಡ ಹಾಗೂ ಶಿರಸಿ ಸ್ಟಾರ್ ಮಧ್ಯೆ ನಡೆಯಿತು. ಶಿರಸಿ ಸ್ಟಾರ್ಸ ವಿಜೇತರಾದರು. ‘ಕೊರೊನಾ ಕಾರಣದಿಂದ ಯಾರಿಗೂ ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅದರೊಂದಿಗೆ ವಿವಿಧ ರೀತಿಯ ಒತ್ತಡಗಳಿರುತ್ತವೆ. ಪತ್ರಕರ್ತರಿಗೂ ಕ್ರೀಡೆಗಳಲ್ಲಿ ಭಾಗವಹಿಸುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಆ ಕೊರತೆಯನ್ನು ದೂರ ಮಾಡಿಕೊಳ್ಳಲು ಸುಮಾರು 10 ವರ್ಷಗಳ ನಂತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಯಾರು ಪ್ರಶಸ್ತಿ ಗೆದ್ದರೂ ನಮ್ಮವರೇ ಆಗಿರುತ್ತಾರೆ. ಹಾಗಾಗಿ ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ’ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಮೈದಾನಕ್ಕೆ ಆಗಮಿಸಿದ ಅವರು, ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಕೋರಿದರು. ನಗರಸಭೆ ಸದಸ್ಯರಾದ ಪ್ರೇಮಾನಂದ ಗುನಗ, ಮುನ್ನಾ, ಉಲ್ಲಾಸ ಕೇಣಿ, ರತ್ನಾಕರ ನಾಯ್ಕ, ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಗಿರೀಶ ನಾಯ್ಕ ವೇದಿಕೆಯಲ್ಲಿದ್ದರು. ಸಮಿತಿ ಸದಸ್ಯರಾದ ನಾಗರಾಜ ಹರಪನಹಳ್ಳಿ, ನವೀನ್ ಸಾಗರ್ , ದೀಪಕ್ ಗೋಕರ್ಣ ಇದ್ದರು. ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿ, ವಂದಿಸಿದರು.