ಹಳೆಯ ವಿದ್ಯಾರ್ಥಿಗಳಿಂದ ಕೊಡುಗೆ
ತಾಳಿಕೋಟೆ11: ಶಿಕ್ಷಕರ ದಿನದ ಅಂಗವಾಗಿ ಪಟ್ಟಣದ ವಿಪಿಎಂ. ಪ್ರಾಥಮಿಕ ಹಾಗೂ ಸೆಕ್ರೆಡ್ ಹಾರ್ಟ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಕಲಿತ ಶಾಲೆ, ಗುರು ಕಾಣಿಕೆಯಾಗಿ ಸುಮಾರು 35 ಸಾವಿರ ಮೌಲ್ಯದ ನೀರು ಶುದ್ಧೀಕರಣ ಘಟಕವನ್ನು ನೀಡಿದರು.
ಹಳೆಯ ವಿದ್ಯಾರ್ಥಿಯ ಸಂಘಟನೆಯ ಅಧ್ಯಕ್ಷ ಸಾಹಿಲ್ ಮುರಾಳ ಮಾತನಾಡಿ, ಸುಮಾರು ಇನ್ನೂರಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡಿದ್ದು, ಕಲಿತ ಶಾಲೆಗೆ ಏನಾದರೂ ಕಾಣಿಕೆ ನೀಡುವ ಆಲೋಚನೆ ಮಾಡಿದೆವು. ಹೆಚ್ಚು ಮಕ್ಕಳಿಗೆ ಅನುಕೂಲವಾಗುವ ಶುದ್ಧ ಕುಡಿಯುವ ನೀರಿನ ಶುದ್ಧೀಕರಣ ಘಟಕ ನೀಡಲು ತೀರ್ಮಾನಿಸಿದೆವು. ಶಿಕ್ಷಕ ದಿನಾಚರಣೆ ಅಂಗವಾಗಿ ಪುಟ್ಟ ನೆರವಿನ ಮೂಲಕ ಗುರುವಿನ ಋಣ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗುರುವಿನ ಋಣ ತೀರಿಸಲಾಗದ್ದು ಎಂದರು. ಮುಂದಿನ ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ನಗರಾಭಿವೃದ್ಧಿ, ಶಿಕ್ಷಣ, ಪರಿಸರ ರಕ್ಷಣೆ, ಸ್ವಚ್ಛತೆಗಳಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ತೌಸೀಪ್ ಹೊನ್ನುಟಗಿ, ಕಾರ್ಯದರ್ಶಿ ಸಿರಾಜ್ ನದಾಫ್, ಸದಸ್ಯರುಗಳಾದ ವೆಂಕಟೇಶ ಸೋನಾರ, ಸಾಗರ ಗುಪ್ತಾ, ರಾಮಪ್ಪ ಮಸರಕಲ್ಲ, ಪ್ರಜ್ವಲ ಸಜ್ಜನ, ವಿನಿತಾ ಅಗರವಾಲ, ಸೌಮ್ಯ ಕತ್ತಿ , ವಿಪಿಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಸೆಕ್ರೆಡ್ ಹಾರ್ಟ ಆಂಗ್ಲಮಾಧ್ಯಮ ಪ್ರೌಢಶಾಲೆಯ ವ್ಯವಸ್ಥಾಪಕ ಫಾ.ರಾಬರ್ಟ ಕ್ರಾಸ್ತಾ, ಸಿ.ಐರಿನ್, ಶಿಕ್ಷಕ ವೃಂದ ಇದ್ದರು.