ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಸಹಕರಿಸಿ: ಡಿ. ಎನ್. ತಹಶೀಲ್ದಾರ
ಯರಗಟ್ಟಿ 11: ಕೇಂದ್ರ ವಸತಿ ಮತ್ತು ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಸ್ವಚ್ಛ ಭಾರತ ಅಭಿಯಾನ (ನಗರ) ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಆದೇಶದಂತೆ ಪಟ್ಟಣದ ನಾಗರಿಕರಿಗೆ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಅಭಿಯಾನ ಹಮ್ಮಿಕೊಂಡಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ದೀಪಾವಳಿ ಆಚರಣೆ ವೇಳೆ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳನ್ನು ಉಪಯೋಗಿಸುವದರಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯಾಗುವದರಿಂದ ಸಾರ್ವಜನಿಕರ ಹಾಗೂ ಜೀವ ಸಂಕುಲನದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಪಟ್ಟಣದಲ್ಲಿ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಉಪಯೋಗಿಸಲು ಸೂಚಿಸಿದೆ.
ನಿಷೇಧಿತ ಪ್ರದೇಶಗಳಾದ ಶಾಲಾ ಕಾಲೇಜು, ಆಸ್ಪತ್ರೆಗಳ ಸುತ್ತಮುತ್ತ ಮತ್ತು ಯಾವುದೇ ನಿಷೇಧಿತ ಪ್ರದೇಶಗಳಲ್ಲಿ ಪಟಾಕಿಗಳನ್ನು ಸ್ಪೋಟಿಸುವಂತಿಲ್ಲ. ಹಬ್ಬದ ಆಚರಣೆ ಸಂದರ್ಭದಲ್ಲಿ ಏಕಬಳಕೆ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಉಪಯೋಗಿಸುವುದು ಹಾಗೂ ಮಾರುವುದು ಪಟ್ಟಣದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು ಎಂದು ಕೋರಿದ್ದಾರೆ.