ಮುಂದುವರೆದ ಡೋಣಿ, ಸೋಗಲಿ ಹಳ್ಳದ ಅರ್ಭಟ, ಸೇತುವೆಗಳು ಮುಳಗಡೆ ಆಗಿ ಸಂಚಾರ ಬಂದ್ : ಮುಂಜಾಗ್ರತಾ ಕ್ರಮ ಕೈಕೊಳ್ಳದ ಜಿಲ್ಲಾಡಳಿತ, ಸಾರ್ವಜನಿಕರ ಪರದಾಟ,
ತಾಳಿಕೋಟೆ: ತಾಲೂಕಿನ ಹಲವಡೆ ಮಳೆಯ ಅರ್ಭಟ ಹೆಚ್ಚಾಗಿದ್ದು ಡೋಣಿ ನದಿ ಹಾಗೂ ಸೋಗಲಿ ಹಳ್ಳದ ಪ್ರವಾಹದಿಂದ ತಾಳಿಕೋಟೆ ಪಟ್ಟಣದ ಸಂಪರ್ಕ ಕಡಿತಗೊಂಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರು ಹೈರಾಣಾಗುವಂತೆ ಮಾಡಿದೆ.
ತಾಲೂಕಿನಾಧ್ಯಂತ ಹರಿಯುತ್ತಿರುವ ಡೋಣಿ ನದಿಗೆ ಬೆಳಿಗ್ಗೆನಿಂದಲೇ ಪ್ರವಾಹ ಆರಂಭವಾಗಿದ್ದು ವಿಜಯಪುರ ಮುಖ್ಯ ರಸ್ತೆಯಲ್ಲಿರುವ ಡೋಣಿ ನದಿ ಸೇತುವೆ ಮುಳಗಡೆ ಆಗಿದೆ. ಇನ್ನು ಮೂಕಿಹಾಳ ಹತ್ತಿರವಿರುವ ಸೋಗಲಿ ಹಳ್ಳ ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದು ಮೂಕಿಹಾಳ ಬಳಿ ಸೋಗಲಿ ಸೇತುವೆ ಮುಳುಗಡೆ ಆಗಿದೆ. ಇದರಿಂದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳು ಬಂದ್ ಆಗಿದ್ದು ಸಾರ್ವಜನಿಕರು ಹೈರಾಣಾಗುವಂತೆ ಮಾಡಿದೆ.
ಡೋಣಿ ನದಿಯ ಅಡ್ಡಲಾಗಿ ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಳೆದ ಒಂದು ವರ್ಷದ ಹಿಂದೆ ಶಿಥಿಲಗೊಂಡಿತ್ತು. ಹಳೆ ಸೇತುವೆ ಹಾಗೂ ರಸ್ತೆ ದುರಸ್ಥಿ ಮಾಡಿ ಸಂಪರ್ಕ ಕಲಿಸಲಾಗಿತ್ತು. ಇದು ಕೆಳ ಮಟ್ಟದ ಸೇತುವೆಯಾಗಿದ್ದರಿಂದ ಮಳೆಗಾಲದಲ್ಲಿ ಡೋಣಿ ಪ್ರವಾಹದಿಂದ ಬಹುತೇಕ ಮುಳಗಡೆಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಹಡಗಿನಾಳ ಮೂಕಿಹಾಳ ಮಾರ್ಗದಲ್ಲಿ ಡೋಣಿ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾತ್ಕಾಲಿಕವಾಗಿ ಸೇತುವೆ ಮೇಲೆ ವಾಹನಗಳು ಹಾಯ್ದು ಹೋಗಬಹುದು. ಆ ರಸ್ತೆಗೆ ಸೋಗಲಿ ಹಳ್ಳ ಅಡ್ಡ ಬರುತ್ತದೆ. ಸೋಗಲಿ ಹಳ್ಳಕ್ಕೆ ನೂತವಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಅದು ಕೆಳ ಮಟ್ಟದ ಸೇತುವೆ ಆಗಿದ್ದರಿಂದ ಸೋಗಲಿ ಪ್ರವಾಹದಿಂದ ಆ ಸೇತುವೆಯೂ ಮುಳಗಡೆ ಆಗಿದೆ. ಇದರಿಂದ ಪಟ್ಟಣದಿಂದ ವಿಜಯಪುರ, ಬಸವನಬಾಗೆವಾಡಿ, ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ, ಇಲಕಲ್ ಸೇರಿದಂತೆ ಮಿಣಜಗಿ, ಹಿರೂರ, ಮೂಕಿಹಾಳ, ಮಡಿಕೇಶ್ವರ, ಢವಳಗಿ, ಬಳಗಾನೂರ ಗ್ರಾಮಗಳಿಂದ ತಾಲೂಕು ಹಾಗೂ ಪ್ರಮುಖ ವಾಣಿಜ್ಯ ನಗರವಾದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡವು. ಮಳೆಗಾಲದಲ್ಲಿ ಇಂತಹ ಸ್ಥಿತಿ ಉಂಟಾಗುತ್ತದೆ ಎನ್ನುವ ಮಾಹಿತಿ ಇದ್ದರೂ ಸಹಿತ ಜಿಲ್ಲಾಡಳಿತ ಯಾವುದೇ ಕ್ರಮ ಕೈಕೊಳ್ಳದಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡಿದ್ದರಿಂದ ವಾಹನಗಳು ಸಾಲು ಗಟ್ಟಿ ನಿಂತವು. ವಿಜಯಪುರಕ್ಕೆ ಹೋಗುವವವರು ದೇವರ ಹಿಪ್ಪರಗಿ ಮಾರ್ಗವಾಗಿ ಹಾಗೂ ಮುದ್ದೇಬಿಹಾಳ ಮಾರ್ಗವಾಗಿ ಹೋಗುವವರು ಕೊಡೆಕಲ್ಲ, ನಾರಾಯಣಪೂರ ಮಾರ್ಗವಾಗಿ 100 ಕ್ಕೂ ಅಧಿಕಿ ಕಿಮೀ ಸುತ್ತುವರೆದು ಸಂಚಾರ ನಡೆಸಿದರು. ಸೇತುವೆ ಕಡಿತಗೊಂಡಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟು ಪ್ರಯಾಣಿಕರು ಪರದಾಡಿದರು.
ಮಾಜಿ ಸಚಿವರ ಪರದಾಟ :- ತಾಲೂಕಿನ ಪಿರಾಪೂರ ಗ್ರಾಮಕ್ಕೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಮಾಜಿ ಸಚಿವ ಎಸ್,ಆರ್,ಪಾಟೀಲ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಪರದಾಟ ನಡೆಸಿದ ಪ್ರಸಂಗ ನಡೆದಿದೆ. ಬಾಗಲಕೋಟೆಯಿಂದ ತಾಳಿಕೋಟೆ ಮಾರ್ಗವಾಗಿ ಪಿರಾಪೂರಕ್ಕೆ ಹೋಗಲು ವಾಹನದಲ್ಲಿ ಬಂದಿದ್ದರು. ಇಲ್ಲಿಗೆ ಬರುವಷ್ಟರಲ್ಲಿ ಡೋಣಿ, ಸೋಗಲಿ ಸೇತುವೆ ಮುಳಗಡೆ ಆಗಿ ಸಂಪರ್ಕ ಕಡಿತಗೊಂಡಿದ್ದರಿಂದ ಪರದಾಟ ನಡೆಸಿದರು. ಡೋಣಿ ನದಿಯಿಂದ ಮುಂದೆ ರಸ್ತೆ ಇಲ್ಲದಿರುವದನ್ನು ಅರಿತ ಅವರು ಡೋಣಿ ನದಿಯ ಶಿಥಲಗೊಂಡ ಸೇತುವೆ ಮೇಲೆ ನಡೆಯುತ್ತಾ ಡೋಣಿ ನದಿ ದಾಟಿ ನಂತರ ಕಾರ್ಯಕರ್ತರ ವಾಹನದಲ್ಲಿ ಪಿರಾಪೂರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಮರಳಿ ಬಂದು ಸೇತುವೆ ಮೇಲೆ ನಡೆದುಕೊಂಡೇ ಡೋಣಿ ನದಿ ದಾಟಿ ತಮ್ಮ ವಾಹನದಲ್ಲಿ ಬೆಂಗಳೂರತ್ತ ಪ್ರಯಾಣ ಬೆಳೆಸಿದ ಪ್ರಸಂಗ ನಡೆಯಿತು.
ಸೋಗಲಿ ಹಳ್ಳಕ್ಕೆ ಭಾರಿ ಪ್ರವಾಹ :- ಬಸವನಬಾಗೇವಾಡಿ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲುಕಿನಾಧ್ಯಂತ ಸುರಿದ ಭಾರಿ ಮಳೆಯಿಂದಾಗಿ ಮೂಕಿಹಾಳ ಹತ್ತಿರವಿರುವ ಸೋಗಲಿ ಹಳ್ಳಕ್ಕೆ ಭಾರಿ ಪ್ರಮಾಣದ ಪ್ರವಾಹ ಬಂದಿದ್ದು ಹಲವು ರೈತರ ಬೆಳೆಗಳು ನಷ್ಟವಾಗಿವೆ. ಸೋಗಲಿ ಹಳ್ಳ ತುಂಬಿ ಹರಿದಿದ್ದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದೆ. ಇದರಿಂದ ಬೆಳೆಗಳು ನಷ್ಟವಾಗಿವೆ. ಜಯವಾಡಗಿ, ಬ್ಯಾಕೋಡ, ಪಡೇಕನೂರ, ಇಂಗಳಗೇರಿ, ತಾರನಾಳ, ಮಡಿಕೇಶ್ವರ ಗ್ರಾಮಗಳಲ್ಲಿ ಬಾರಿ ಪ್ರಮಾಣದ ಮಳೆಯಾಗಿದ್ದು ಸೋಗಲಿ ಹಳ್ಳ ತುಂಬಿ ಹರಿದೆ. ಸೋಗಲಿ ಹಳ್ಳದ ಪ್ರವಾಹ ಹೆಚ್ಚಾಗಿದ್ದರಿಂದ ತಾಲೂಕಿನ ಕೂಚಬಾಳ, ಬಾವೂರ, ಮೂಕಿಹಾಳ, ಕಲ್ಲದೇವನಹಳ್ಳಿ, ಹಡಗಿನಾಳ ಗ್ರಾಮಗಳ ಜಮೀನುಗಳಿಗೆ ನೀರು ಬಂದಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 300 ಹೆಕ್ಟರಗೂ ಅಧಿಕ ಜಮೀನುಗಳಿಗೆ ಸೋಗಲಿ ಹಳ್ಳದ ಪ್ರವಾಹದ ನೀರು ಬಂದಿದ್ದು ರೈತರ ಸಂಕಷ್ಟ ಹೇಳತೀರದಾಗಿದೆ.