ಕಾರವಾರ

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ;

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ;
ಕಾರವಾರದಲ್ಲಿ ರಾಜಶೇಕರ ಮುಲಾಲಿ ಪತ್ರಿಕಾಗೋಷ್ಠಿ ಮಾಡಿದ ಕ್ಷಣ

ಕಾರವಾರ 25: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಮಾಜಿಕ ನ್ಯಾಯ ಹಾಗೂ ಜಾತ್ಯಾತೀತ ಪರಿಷತ್ತನ್ನಾಗಿ ಪರಿವರ್ತಿಸುವುದರ ಜೊತೆಗೆ , ಪರಿಷತ್ತನಲ್ಲಿನ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರಕ್ಕೆ ತಡೆಹಾಕಬೇಕಿದೆ. ಶುದ್ಧ ಸಾಹಿತ್ಯ ಚಟುವಟಿಕೆ ನಡೆಸುವುದು ಮತ್ತು ರಾಜಕೀಯದವರು ಹೇಳಿದವರನ್ನು ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ತಪ್ಪಿಸುವುದಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ ಅವರು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಾಹಿತ್ಯದ ದಿಗ್ಗಜರು ಹಾಗೂ ಮತದಾರರನ್ನು ಭೇಟಿಯಾಗಿ ಮಾತನಾಡಿದ್ದಾಗಿ ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕಾರವಾರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ ಅಜೀವ ಸದಸ್ಯರ, ಮತದಾರರ ಮತಯಾಚಿಸಿದ ಅವರು ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯವರು ಈಚಿವ ದಶಕಗಳಲ್ಲಿ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಏರಿಲ್ಲ. ಈ ಸಲ ನನಗೆ ಅವಕಾಶ ನೀಡಿ ಎಂದು ಕಸಾಪ ಸದಸ್ಯರನ್ನು ವಿನಂತಿಸಿದರು.

ಪರಿಷತ್ತನ್ನು ವಿನೂತನವಾಗಿ ಕಟ್ಟಬೇಕಿದೆ. 6 ಕೋಟಿಗೂ ಹೆಚ್ಚು ಕನ್ನಡಿಗರಿದ್ದು, ಮತದಾರರು ಮಾತ್ರ 3.5 ಲಕ್ಷ ಇದ್ದಾರೆ. ಕಸಾಪ ಸದಸ್ಯರ ಸಂಖ್ಯೆ ಹೆಚ್ಚಬೇಕಿದೆ. ಪರಿಷತ್ತು ಬೆಂಗಳೂರು, ಮೈಸೂರಿಗೆ ಸೀಮಿತವಾಗದೇ ಅದನ್ನು ಕರ್ನಾಟಕದಲ್ಲಿ ಎಲ್ಲೆಡೆ ವಿಕೇಂದ್ರೀಕರಣ ಮಾಡಬೇಕಿದೆ. ತಾವು ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಕಸಾಪಕ್ಕೆ ಪ್ರತ್ಯೇಕ ಮಹಿಳಾ ಘಟಕ ಸ್ಥಾಪಿಸಿ, ಮಹಿಳಾ ಬರಹಗಾರರಿಗೆ ವಿಶೇಷ ಆದ್ಯತೆ ನೀಡುವೆ. ಬೆಳಗಾವಿ, ಕಲಬುರ್ಗಿ, ದಾವಣಗೆರೆ ಹೀಗೆ ವಲಯವಾರು ಗೌರವ ಕಾರ್ಯದರ್ಶಿಗಳನ್ನು ನೇಮಿಸಿ, ಸಾಹಿತ್ಯ ಚಟುವಟಿಕೆ ಹೆಚ್ಚಿಸಲಾಗುವುದು. ಸಾರ್ವಜನಿಕ ದೇಣಿಗೆ ಮೂಲಕ ಎಲ್ಲೆಲ್ಲಿ ಕನ್ನಡ ಭವನಗಳಿಲ್ಲವೂ ಅಲ್ಲಿ ಕನ್ನಡ ಭವನ ಸ್ಥಾಪನೆ ಮಾಡುವುದು ಹಾಗೂ ಗಡಿ ನಾಡಿನಲ್ಲಿ ಕನ್ನಡಕ್ಕಾಗಿ ದುಡಿದವರಿಗೆ ಹೆಚ್ಚಿನ ಆದ್ಯತೆಯನ್ನು ಸಮ್ಮೇಳನಗಳಲ್ಲಿ ಸಿಗುವಂತೆ ಮಾಡಲಾಗುವುದು ಎಂದರು. 

ಭ್ರಷ್ಟಾಚಾರ ತಡೆಗೆ ಆದ್ಯತೆ : 

ಪರಿಷತ್ತನಲ್ಲಿ ಭ್ರಷ್ಟಾಚಾರವಿದೆ. ಇದನ್ನು ತಡೆಯುವೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಹಿಂದಿನ ಅವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಪ್ರಶ್ನಿಸಿ, ಪ್ರಕರಣ ದಾಖಲಿಸಿರುವೆ. ಕೋರ್ಟನಲ್ಲಿ ಪ್ರಕರಣವಿದೆ. ಪರಿಷತ್‍ನ ಅವ್ಯವಹಾರವನ್ನು ಸಹ ಪ್ರಶ್ನಿಸಲಾಗಿದೆ. ಪರಿಷತ್ತಗೆ ಪತ್ರಕರ್ತರು ಬರಬೇಕು ಎಂದ ಅವರು ನಾನು ಅಧ್ಯಕ್ಷನಾದಲ್ಲಿ ಪರಿಷತ್ ಕಾರ್ ಬಳಸುವುದಿಲ್ಲ. ಸಾರಿಗೆ ವೆಚ್ಚ ಪಡೆಯುವುದಿಲ್ಲ ಎಂದರು. ರಾಜಕೀಯ ಹಸ್ತಕ್ಷೇಪ ಕಡಿಮೆಮಾಡಲಾಗುವುದು ಎಂದರು. ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವೆ ಎಂದರು.

ಪ್ರಶಸ್ತಿಗಳು ಮಾರಾಟವಾಗಿವೆ :

ಪರಿಷತ್ತನಲ್ಲಿ ಪ್ರಶಸ್ತಿಗಳು ಮಾರಾಟವಾಗಿವೆ. ಅಧಿಕಾರದ ದುರುಪಯೋಗವಾಗಿದೆ, ಮತಗಳ ಮೇಲೆ ಕಣ್ಣಿಟ್ಟು, ಸ್ವಜನ ಪಕ್ಷಪಾತಮಾಡಿ, ಕೆಲವರಿಗೆ ಪ್ರಶಸ್ತಿ ನೀಡಲಾಗಿದೆ. ಇದಕ್ಕೆಲ್ಲಾ ಮುಂದೆ ತಡೆ ಹಾಕಲಾಗುವುದು. ಜಾತಿವಾದ ನಿಲ್ಲಿಸಿ, ಶುದ್ಧ ಸಾಹಿತ್ಯದ ಚಟುವಟಿಕೆಗೆ ಅವಕಾಶ ನೀಡಲಾಗುವುದು, ಸಾಮಾಜಿಕ ನ್ಯಾಯ ಕಾಪಾಡಲಾಗುವುದು ಎಂದು ರಾಜಶೇಖರ ಮುಲಾಲಿ ಹೇಳಿದರು. ಪರಿಷತ್ ಚಟುವಟಕೆಗಳ ಡಿಜಿಟಲೀಕರಣ ಸೇರಿದಂತೆ ಆಧುನಿಕ ಸ್ಪರ್ಶ ನೀಡಲಾಗುವುದು. ಕನ್ನಡ ಶಾಲೆಗಳ ಸುಧಾರಣೆ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವ ಹೋರಾಟವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಸಮ್ಮೇಳನದ ನಿರ್ಣಯಗಳು ಅನುಷ್ಠಾನವಾಗುವುದಿಲ್ಲ ಎಂಬ ಮಾತು ಇದೆ. ಆದರೆ ನನ್ನ ಅವಧಿಯಲ್ಲಿ ಸರ್ಕಾರದ ಬಳಿ ಹಠ ಹಿಡಿದು ಕನ್ನಡಿಗರ ಬೇಕು ಬೇಡಗಳಿಗೆ ಪರಿಷತ್ತು ನಿಜದನಿಯಾಗುವಂತೆ ಮಾಡುವೆ ಎಂದು ಮುಲಾಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದುರುಗೇಶ್ ಉಪ್ಪಾರ, ತುರುಣ ಇದ್ದರು.

ಸುದ್ದಿ ಓದಿ