ಕಾಮರ್ಸ ಅಲ್ಯೂಮ್ನಿ ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿ : ಪ್ರೊ. ಸಿ. ಎಸ್‌. ಬಸವರಾಜ

ಕಾಮರ್ಸ ಅಲ್ಯೂಮ್ನಿ ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿ : ಪ್ರೊ. ಸಿ. ಎಸ್‌. ಬಸವರಾಜ

ಲೋಕದರ್ಶನ ವರದಿ 

ಕಲಬುರಗಿ 27 : ಕಾಮರ್ಸ ಅಲ್ಯೂಮ್ನಿ ಅಸೋಸಿಯೇಷನ್ ವಾಣಿಜ್ಯ ವಿಭಾಗದ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿದೆ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಎಸ್‌. ಬಸವರಾಜ ಅಭಿಪ್ರಾಯಪಟ್ಟರು.  

ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ 'ಕಾಮರ್ಸ್‌ ಅಲ್ಯೂಮ್ನಿ ಅಸೋಸಿಯೇಷನ್ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒಂದೇ ವೇದಿಕೆಗೆ ತರಲು ಕಾಮರ್ಸ ಅಸೋಸಿಯೇಷನಿಂದ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದ ಒಗ್ಗೂಡುವಿಕೆ, ಸಹಕಾರ ಮತ್ತು ಮಾರ್ಗದರ್ಶನ ಪಡೆಯುವ ಮೂಲಕ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೋತ್ಸಾಹ ಸಿಗಲಿದೆ ಎಂದರು.  

ವಾಣಿಜ್ಯ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜನಾಳ್ಕರ್ ಲಕ್ಷ್ಮಣ್  ಮಾತನಾಡಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾಮರ್ಸ ವಿದ್ಯಾರ್ಥಿಗಳಿಗೆ ವಾಣಿಜ್ಯ ಜಗತ್ತಿನ ವಾಸ್ತವತೆ, ವೃತ್ತಿಪರತೆ ಜ್ಞಾನ, ವೃತ್ತಿ ಸ್ಪರ್ಧಾತ್ಮಕತೆ, ವಿಶೇಷ ಅವಕಾಶ ಮತ್ತು ಸವಾಲುಗಳ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನ ಸಿಗುತ್ತದೆ. ಭವಿಷ್ಯದ ಗುರಿ ಮತ್ತು ಸಾಧನೆಗೆ ಸಹಕಾರ ಮತ್ತು ಪಾಲ್ಗೊಳ್ಳುವಿಕೆಗೆ ಪ್ರೇರಣೆಯಾಗಿದೆ ಎಂದರು.    

ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ವಿಜಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿಪರ ಮತ್ತು ಉತ್ತಮ ಚಟುವಟಿಕೆಗಳ ಮೂಲಕ ಮಾದರಿ ಸಂಘಟನೆಯಾಗಲಿ ಎಂದು ಆಶಿಸಿದರು.  ಹಳೆವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕರಿಗೊಳೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಆಶಯ, ಉದ್ದೇಶ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.  

ಹಳೆಯ ವಿದ್ಯಾರ್ಥಿಗಳಾದ ಡಾ. ಪಾಂಡುರಂಗ ಪತ್ತಿ, ಡಾ. ಕಲ್ಲಿನಾಥ ಪಾಟೀಲ್ ತಮ್ಮ ಶೈಕ್ಷಣಿಕ ಜೀವನದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ವಾಣಿಜ್ಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ.ಎಮ್‌. ಕನ್ನ್ಹಳಿ ಮತ್ತು ಡಾ. ಬಿ. ಆರ್‌. ಅಂಬೇಡ್ಕರ್ ಕಾಲೇಜಿನ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಶೀಲವಂತ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕು. ಸಂಜಯ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಸಂಘದ ಕೋಶಾಧಿಕಾರಿ ಡಾ. ಕೈಲಾಸಪತಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಸವಿತಾ ಪಾಟೀಲ್ ವಂದಿಸಿದರು. 


ಸುದ್ದಿ ಓದಿ