ಕರಾವಳಿ ಜನ ತತ್ತರ: ಮಲ್ಲಾಪುರ ಟೌನ್ ಶಿಪ್ ನದಿ ನೀರಲ್ಲಿ
ಕಾರವಾರ: ಅಣೆಕಟ್ಟುಗಳಿಂದ ಸತತವಾಗಿ ಕಾಳಿ ನದಿಗೆ 215027 ಲಕ್ಷ ಕ್ಯೂಸೆಕ್ಸ ನೀರು ಹರಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಬೆಳಗಿನತನಕ ಮೇಘಸ್ಪೋಟ ಕಾರಣ 2.20 ಲಕ್ಷ ಕ್ಯೂಸೆಕ್ಸ ನೀರು ಅಣೆಕಟ್ಟುಗಳಿಗೆ ಹರಿದು ಬರತೊಡಗಿತು. ಅಣೆಕಟ್ಟುಗಳು ತುಂಬಲು 1.5 ಮೀಟರ್ ಬಾಕಿ ಇಟ್ಟುಕೊಂಡು, 1.50 ಲಕ್ಷ ನೀರನ್ನು ಸತತವಾಗಿ ನದಿಗೆ ಬಿಡಲಾಗಿದ್ದು, ಇದು ಮೇಘಸ್ಪೋಟದ ಸಮಯದಲ್ಲಿ ಅನಿವಾರ್ಯ ಕ್ರಮ ಎಂದು ಜಿಲ್ಲಾಧಿಕಾರಿ ಹೇಳಿದರು. ನದಿ ದಂಡೆಯ ಜನರು ಸ್ಥಳಾಂತರವಾಗಲೇಬೇಕು. ಕಾಳಜಿ ಕೇಂದ್ರಗಳಿಗೆ ಬರಬೇಕು. ಇನ್ನು ನಾಲ್ಕು ದಿನ ಮಳೆಇದೆ. ಈ ಸಮಯದಲ್ಲಿ ಜನರು ಸಹಕಾರ ನೀಡಬೇಕು. ಜಿಲ್ಲಾಡಳಿತ ಬೆಳಗಾವಿಯಿಂದ ಆರ್ಮಿ ನೆರವನ್ನು ಸಹ ಕೇಳಿದೆ. ಎನ್ಡಿಆರ್ಎಫ್ ಟೀಮ್ ಮತ್ತು ನೇವಿಯ ಎಮರ್ಜನ್ಸಿ ರೆಸ್ಪಾನ್ಸ ಟೀಮ್ ಕದ್ರಾ, ಗಂಗಾವಳಿ ಭಾಗದಲ್ಲಿ ಜನರಿಗೆ ನೆರವು ನೀಡುತ್ತಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಪ್ರವಾಹ ಸನ್ನಿವೇಶದಲ್ಲಿ ಶಕ್ತಿ ಮೀರಿ ಜನರಿಗೆ ನೆರವಾಗುತ್ತಿದ್ದಾರೆಂದು ಹೇಳಿದರು. ಪ್ರವಾಸಿಗರು ಇರಲಿ, ನಾಗರಿಕರು ಇರಲಿ ಎರಡು ದಿನ ಜಾಗೃತವಾಗಿರಬೇಕು. ಕಾಡಿಗೆ ಮತ್ತು ನದಿ ದಂಡೆ, ಜಲಪಾತಗಳ ಬಳಿ ತೆರಳಬಾರದು ಎಂದು ವಿನಂತಿಸಿದರು. ಮಲ್ಲಾಪುರ ಟೌನ್ ಶಿಪ್ ನದಿ ನೀರಲ್ಲಿ ಮುಳುಗಿದ್ದು, ಕೈಗಾ ನೌಕರರ ಕಾರುಗಳು ಮಳೆ ನೀರಲ್ಲಿ ತೇಲಾಡಿವೆ. ನದಿ ದಂಡೆಯ ಜನರನ್ನು ಐಎನ್ಎಸ್ ಕದಂಬ ನೌಕಾನೆಲೆಯ ಎಮರ್ಜನ್ಸಿ ರೆಸ್ಪಾನ್ಸ ಟೀಮ್ ತಂಡ ರಕ್ಷಿಸಿದೆ. ಕದ್ರಾ ಗಾಂಧಿ ನಗರದ ನಾಲ್ವರ ಕುಟುಂಬವನ್ನು ಇಆರ್ಟಿ ತಂಡ ರಕ್ಷಿಸಿದೆ. ಸಹಾಯಕ ಕಮಿಷನರ್ ವಿದ್ಯಾಶ್ರೀ ಚಂದರಗಿ ಸ್ಥಳದಲ್ಲೇ ಬೀಡು ಬಿಟ್ಟು ಕಾಳಜಿ ಕೇಂದ್ರಗಳ ಜನರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. 884 ಜನರು ಇಲ್ಲಿನ ಕಾಳಜಿ ಕೇಂದ್ರಗಳಲ್ಲಿ ರಕ್ಷಿಸಲಾಗಿದೆ. 27 ಗ್ರಾಮಗಳ ಜನರನ್ನು ಆಯಾ ಗ್ರಾಮಗಳ ಎತ್ತರದ ಪ್ರದೇಶಗಳ ಶಾಲೆಯ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಿ ನದಿ ದಂಡೆಯ ಗ್ರಾಮಗಳ ಜನರ ಜೀವ ಹಾನಿಯಾಗದಂತೆ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ವಿದ್ಯಾಶ್ರೀ ಹೇಳಿದರು.