ದೇಶದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಕೊಡುಗೆ ಅಪಾರ: ಸಾಹಿತಿ ಅಶೋಕ ಹಂಚಲಿ
ತಾಳಿಕೋಟಿ 19: ಇಂದು ದೇಶವು ಆರ್ಥಿಕವಾಗಿ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ ಎಂದರೆ ಇದಕ್ಕೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಹಕಾರಿ ಸಂಘಗಳ ಕೊಡುಗೆ ಅಪಾರವಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ಖ್ಯಾತ ಸಾಹಿತಿ ಅಶೋಕ ಹಂಚಲಿ ತಿಳಿಸಿದರು.
ಪಟ್ಟಣದಲ್ಲಿ ಬಸವೇಶ್ವರ ಪತ್ತಿ ಸಹಕಾರಿ ಸಂಘ ನಿಯಮಿತ ಇದರ 19ನೇ ವಾರ್ಷಿಕ ಸರ್ವಸಾಧರಣ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಹಕಾರಿ ರಂಗವು ಮಹಾತ್ಮಾ ಗಾಂಧಿಜೀಯವರ ಕನಸಿನ ಕೂಸಾಗಿದೆ ಗ್ರಾಮಗಳಿಂದಲೇ ದೇಶದ ಅಭವೃದ್ಧಿಯಾಗಬೇಕು ಇದಕ್ಕೆ ಪೂರಕವಾಗಿದೆ. ಗ್ರಾಮಗಳಲ್ಲಿ ಸಹಕಾರಿ ಸಂಘಗಳ ಸ್ಥಾಪನೆಯಾಗಬೇಕೆಂದು ಅವರು ಬಲವಾಗಿ ನಂಬಿದ್ದರು. ಸಹಕಾರಿ ಸಂಘಗಳಿಗೆ ಸಾವಿಲ್ಲ. ಸಂಘದ ನಿರ್ದೇಶಕರು ಪ್ರಾಮಾಣಿಕತೆ ಹಾಗೂ ಗ್ರಾಹಕರ ವಿಶ್ವಾಸಗಳಿಸಿಕೊಳ್ಳುವ ಅಗತ್ಯ ಇದೆ. ಸಾಲಗಾರರನ್ನು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳಬೇಕಾಗಿದೆ ಎಂದರು.
ಶ್ರೀ ಬಸವೇಶ್ವರ ಪತ್ತಿನ ಸಂಘವು ಕೇವಲ 19 ವರ್ಷಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ ಎಂಬುದಕ್ಕೆ ಅದು ಹೊಂದಿರುವ 2 ಕೋಟಿ ದುಡಿಯುವ ಬಂಡವಾಳ ಹಾಗೂ ಪ್ರಸಕ್ತ ವರ್ಷದ 3 ಲಕ್ಷದ ಲಾಭವೇ ಸಾಕ್ಷಿಯಾಗಿದೆ ಇದು ಈ ಸಂಘದ ನಿರ್ದೇಶಕರ ಪ್ರಾಮಾಣಿಕ ಕಳಕಳಿ ಹಾಗೂ ಸಿಬ್ಬಂದಿ ವರ್ಗದ ಮೇಲೆ ಸಾರ್ವಜನಿಕರು ವಿಶ್ವಾಸ ಹೊಂದಿದ್ದಾರೆಂಬುದು ಎತ್ತಿ ತೋರಿಸುತ್ತದೆ. ಇನ್ನೂ ಠೇವಣಿದಾರರ ಸಂಖ್ಯೆ ದುಡಿಯುವ ಬಂಡವಾಳವನ್ನು ಹೆಚ್ಚಿಸುವ ಅಗತ್ಯ ಇದೆ ಎಂದರು.
ಇನ್ನೋರ್ವ ಅತಿಥಿ ಈರಣ್ಣ ಕಲಬುರ್ಗಿ ಮಾತನಾಡಿ ಸಹಕಾರಿ ರಂಗದ ಆರಂಭದ 12ನೇ ಶತಮಾನದಲ್ಲಿಯೇ ಆದರೂ ಅದರ ಸದೃಢತೆ ಹಾಗೂ ಬೆಳವಣಿಗೆ 18ನೇ ಶತಮಾನದ ಈಚೆಗೆ ಆಗಿದೆ. ಯಾವುದೇ ಹಣಕಾಸಿನ ಸಂಸ್ಥೆ ಬೆಳೆಯಲು ಆ ಸಂಸ್ಥೆಯ ನಿರ್ದೇಶಕರ ಹಾಗೂ ಸಿಬ್ಬಂದಿ ವರ್ಗದ ಪಾತ್ರ ಪ್ರಮುಖವಾಗಿದೆ ಎಂದರು.
ಸಂಘದ ಅಧ್ಯಕ್ಷ ವಿಶ್ವನಾಥ ಬಿದರಕುಂದಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷ ವಿಶ್ವನಾಥ ಬಿದರಕುಂದಿ ಉಪಾಧ್ಯಕ್ಷ ಪ್ರದೀಪ ವಿಜಾಪೂರ ನಿರ್ದೇಶಕರುಗಳಾದ ಕಸ್ತೂರಿಚಂದ ಪ್ರಥಮಶೆಟ್ಟಿ, ವಿಶಾಲ ಗುಪ್ತಾ, ಕಾಶಿನಾಥ ಭಂಟನೂರ (ವಕೀಲರು) ಮಾನಸಿಂಗ ಹಜೇರಿ, ರಾಘವೇಂದ್ರ ತಾಳಪಲ್ಲಿ, ಸಂಗಮೇಶ ಇಜೇರಿ, ಭೀಮನಗೌಡ ದೇಸಾಯಿ, ಜಗದೀಶ ಕಟ್ಟಿಮನಿ, ಗೌರವ ಸಲಹೆಗಾರ ಶಂಕರಗೌಡ ಪಾಟೀಲ ಮುಖ್ಯಕಾರ್ಯನಿರ್ವಾಹಕ ಮಲ್ಲನಗೌಡ ಪಾಟೀಲ ಸಿಬ್ಬಂದಿಗಳಾದ ಸಿದ್ದನಗೌಡ ಗೆದಗೇರಿ, ಬಸವರಾಜ ಇಂಗಳಗಿ ಪಿಗ್ಮಿ ಸಂಗ್ರಾಹಕ ಪ್ರಕಾಶ ಪಾಟೀಲ ಇದ್ದರು.
ಅಮರೇಶ ಇಂಗಳಗಿ ಪ್ರಾರ್ಥಿಸಿದರು. ಜಗದೀಶ ಕಟ್ಟಿಮನಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.