ಸ್ವಚ್ಛತೆ ಮೌಲ್ಯವಾದಾಗ ಮಾತ್ರ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ: ಹುಲ್ಲತ್ತಿ
ಬ್ಯಾಡಗಿ 01: ಸ್ವಚ್ಛತೆ ಎಂಬುದು ಮೌಲ್ಯವಾದಾಗ ಮಾತ್ರ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ. ಸ್ವಚ್ಛತೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಪರಿಸರ ಸ್ನೇಹಿ ಬಳಗದ ಸಂಚಾಲಕ ಮೋಹನಕುಮಾರ ಹುಲ್ಲತ್ತಿ ಹೇಳಿದರು.
ಪಟ್ಟಣದ ಪರಿಸರ ಸ್ನೇಹಿ ಬಳಗದ ಸದಸ್ಯರ ಸತತ ಮೂರು ವಾರಗಳ ನಿರಂತರ ಶ್ರಮಧಾನದ ಮೂಲಕ ಸ್ಥಳೀಯ ಮುಪ್ಪಿನಸ್ವಾಮಿ ಮಠದ ಧ್ಯಾನ ಮಂದಿರ ಹಾಗೂ ಸುತ್ತಮುತ್ತಲಿನ ಆವರಣದ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಅವರು, ನಾವು ಆರೋಗ್ಯವಂತರಾಗಿ ಇರಬೇಕಾದರೆ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ನನ್ನ ಮನೆ ಶುಚಿಯಾಗಿದ್ದರೆ ಸಾಲದು. ನಾವು ವಾಸಿಸುವ ಪರಿಸರವೂ ಸ್ವಚ್ಛವಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯ. ಈ ಸ್ವಚ್ಛತಾ ಅಭಿಯಾನಗಳು ನಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರೇರಣೆಯಾಗಬಲ್ಲವು ಎಂದು ತಿಳಿಸಿದರು.ಬಳಗದ ಸದಸ್ಯ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಪಟ್ಟಣದ ಮುಪ್ಪಿನಸ್ವಾಮಿ ಮಠದ ಧ್ಯಾನ ಮಂದಿರ ಸೇರಿದಂತೆ ಸುತ್ತ ಮುತ್ತಲಿನ ಪರಿಸರವನ್ನು ಸ್ವಯಂ ಪ್ರೇರಿತರಾಗಿ ಪರಿಸರ ಸ್ನೇಹಿ ಬಳಗದ ಸದಸ್ಯರು ಶ್ರಮದಾನದ ಮೂಲಕ ಸುಂದರವಾಗಿ ಕಾಣುವಲ್ಲಿ ಶ್ರಮಿಸಿದ್ದಾರೆ. ಜನರ ಮನಸ್ಸು ಶುದ್ಧವಾಗದೇ ದೇಶ ಸ್ವಚ್ಛವಾಗದು, ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿದಾಗ ಇಂತಹ ಶ್ರಮದಾನಗಳಿಗೆ ಅರ್ಥ ಬರುತ್ತದೆ ಎಂದರು.ಮೂರು ವಾರಗಳ ಕಾಲ ಮುಪ್ಪಿನ ಸ್ವಾಮಿ ಮಠದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಪರಿಸರ ಸ್ನೇಹಿ ಬಳಗದ ಸದಸ್ಯರಾದ ಪ್ರವೀಣ ಮುಳಗುಂದ, ಮಂಜುನಾಥ ಮಡಿವಾಳರ, ನಿಂಗಪ್ಪ ಕೋಡಿಹಳ್ಳಿ, ಶೇಖರಗೌಡ, ರವಿ ಡಂಬಳ, ನಾಗರಾಜ ರಾಮಣ್ಣನವರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.