ಪ್ರಜಾ ಪ್ರತಿನಿಧಿ ಅಭಿಯಾನ ಕಾರ್ಯಕ್ರಮ
ಶಿಗ್ಗಾವಿ 14: ಇದೇ ಜುಲೈ 15 ರಿಂದ ಜು. 26ರ ವರೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಮತ್ತು ಪುರಸಭೆಗಳ ಎಲ್ಲ ವಾರ್ಡಗಳಿಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಭೇಟಿ ನೀಡಿ, ಕೊವೀಡ್ ನಿಂದ ನಿಧನರಾದವರ ಖಚಿತ ಸಂಖ್ಯೆ ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹೇಳುವ ಪ್ರಜಾ ಪ್ರತಿನಿಧಿ ಅಭಿಯಾನ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ ಎಂದು ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚನಲ್ಲಿ ಬಿಡುಗಡೆ ಮಾಡಿರುವಂತಹ ಹೇಳಿಕೆ ಪ್ರಕಾರ 3,36,680 ಜನ ಕೋವಿಡ್ನಿಂದ ನಿಧನರಾಗಿದ್ದಾರೆ ಎಂದು ಮಾಹಿತಿ ಇದೆ. ಈ ಮಾರಕ ರೋಗದಿಂದ ಮೃತಪಟ್ಟವರಿಗೆ ಐದು ಲಕ್ಷರೂ.ಪರಿಹಾರ ಕೊಡುವಂತೆ ಪಕ್ಷ ಒತ್ತಾಯಿಸಿತ್ತು. ಆದರೆ, ಆರ್ಥಿಕ ದಿವಾಳಿಯಾಗಿರುವ ಬಿಜೆಪಿ ಸರ್ಕಾರ ಕೇವಲ 36480 ಜನ ಮಾತ್ರ ಕೊವೀಡ್ನಿಂದ ಮೃತಪಟ್ಟಿದ್ದಾರೆ. ಅವರಿಗೆ ಒಂದು ಲಕ್ಷರೂ. ಪರಿಹಾರ ಕೊಡುವುದಾಗಿ ಹೇಳಿ ಹಲವು ನಿಯಮಗಳನ್ನು ಹಾಕಿದೆ. ಅಷ್ಟೇ ಅಲ್ಲದೆ ಮೃತರ ಅಂಕಿ ಅಂಶಗಳನ್ನು ನಿಖರವಾಗಿಲ್ಲ, ಕೊಟ್ಟಿಯಾಗಿದೆ ಜೊತೆಗೆ ಭ್ರಷ್ಟಾಚಾರಕ್ಕೆ ಇಳಿದು ವಿಫಲವಾಗಿದೆ, ಆ ವಿಫಲತೆಯನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಸುಳ್ಳು ಹೇಳಿಕೆಯನ್ನು ನೀಡುತ್ತಿದೆ, ಆದ್ದರಿಂದ ಕಾಂಗ್ರೆಸ್ ಪಕ್ಷ ತಳ ಮಟ್ಟದಿಂದ ಪಕ್ಷ ಸಂಘಟನೆಯ ಜತೆಗೆ ತಾಲೂಕಿನ ಎಲ್ಲ 28 ಗ್ರಾ.ಪಂ ಹಾಗೂ ಶಿಗ್ಗಾವಿ ಪುರಸಭೆಯ 23, ಬಂಕಾಪುರ ಪುರಸಭೆಯ 23 ವಾರ್ಡಗಳಿಗೆ ಭೇಟಿ ನೀಡಿ ಕೊವೀಡ್ನಿಂದ ನಿಧನರಾದವರ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ಮೃತರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪ್ರತಿ ಒಬ್ಬರಿಗೆ ಐದು ಲಕ್ಷ ಪರಿಹಾರ ಕೊಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸುವ ಉದ್ದೇಶ ಈ ಕಾರ್ಯಕ್ರಮದಾಗಿದೆ ಎಂದರು.
ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಕೊವೀಡ್ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ತಜ್ಞರ ವರದಿ ಬಗ್ಗೆ ನಿರ್ಲಕ್ಷ ವಹಿಸಿದ್ದರಿಂದ 2ನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಅಲ್ಲದೆ, ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದ ನೆರೆ ಸಂತೃಸ್ಥರಿಗೆ ಮನೆ ಹಂಚಿಕೆ, ಕಳೆದ ಸಾಲಿನ ಬೆಳೆ ಪರಿಹಾರ ಇದುವರೆಗೂ ವಿತರಿಸಿಲ್ಲ ಎಂದರು.
ಕೆಪಿಸಿಸಿಯ ರಾಜ್ಯ ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ ಮಾತನಾಡಿ, ಕಾಂಗ್ರೇಸ್ ಪಕ್ಷ ಕೇವಲ ಪಕ್ಷ ಬಲಪಡಿಸಲಷ್ಟೇ ಅಲ್ಲ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಿ ಅವರ ಸುಖ-ದುಖಃಗಳನ್ನು ಕೇಳುವ ಕಡೆ ಗಮನಹರಿಸುತ್ತಾ ಬರುತ್ತಿದೆ ಎಂದರು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಎನ್ ಎಮ್ ವೆಂಕೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸವಣೂರ ಬ್ಲಾಕ್ ಅದ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಶ್ರೀಕಾಂತ ಪೂಜಾರ, ಹನುಮರೆಡ್ಡಿ ನಡುವಿನಮನಿ, ಯೂಸುಬ್ಸಾಬ್ ಭಾವಿಕಟ್ಟಿ, ಗುಡ್ಡಪ್ಪ ಜಲದಿ, ಶಿವಾನಂದ ಬಾಗೂರ, ಹನುಮಂತ ಬಂಡಿವಡ್ಡರ, ಕಿರಣ ಪಾಟೀಲ, ಸುಧೀರ ಲಮಾಣಿ, ಪ್ರಕಾಶ ಹಾದಿಮನಿ, ವಸಂತಾ ಬಾಗೂರ, ಮಂಜುನಾಥ ಮಣ್ಣಣ್ಣವರ, ತಹಮೀದಖಾಜಿ, ನೂರಹ್ಮದ್ ಮಳಗಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಂಜುನಾಥ ತಿಮ್ಮಾಪೂರ, ಭಾಬರ್ ಬೋವಾಜಿ, ಬಸವರಾಜ ರಾಗಿ, ಸಿದ್ದಣ್ಣ ಮೊರಬದ ಮತ್ತಿತರರು ಉಪಸ್ಥಿತರಿದ್ದರು.