ಹೊಸಪೇಟೆ

ಚುಟುಕು ರಚನೆಗೆ ಭಾಷಾಜ್ಞಾನದ ಜೊತೆಗೆ ಲೋಕಜ್ಞಾನ ಬೇಕು: ಹನುಮಂತಪ್ಪ ಅಂಡಗಿ

ಚುಟುಕು ರಚನೆಗೆ ಭಾಷಾಜ್ಞಾನದ ಜೊತೆಗೆ ಲೋಕಜ್ಞಾನ ಬೇಕು: ಹನುಮಂತಪ್ಪ ಅಂಡಗಿ

ಹೊಸಪೇಟೆ 16 : ಕಿರಿದರಲ್ಲಿ ಹಿರಿದರ್ಥವನ್ನು ಹಿಡಿದಿಡುವುದೇ ಚುಟುಕು. ವಚನ, ತ್ರಿಪದಿ, ಗಾದೆ, ಒಡಪು ಇಂಥವೆಲ್ಲಕ್ಕೂ ನಿರ್ದಿಷ್ಟವಾದ ಲಕ್ಷಣಗಳಿವೆ. ಇವು ಲಯಬದ್ಧವಾಗಿದ್ದು, ಪದ್ಯದ ಗುಣವನ್ನು ಪಡೆದುಕೊಂಡಿವೆ. ಚುಟುಕು ರಚನೆಗೆ ಭಾಷಾಜ್ಞಾನದ ಜೊತೆಗೆ ಲೋಕಜ್ಞಾನ ಬೇಕು, ಲೋಕಾತೀತ ಮನ ಬೇಕು. ಚುಟುಕು ಕವಿಗಳಿಗೆ ಜನಸಂಪರ್ಕ, ಕೃತಿ ಸಂಪರ್ಕ, ಅನುಭವ ಸಂಪರ್ಕ ಅತ್ಯವಶ್ಯವಾಗಿದೆ. ಭಾಷಾ ಸಂಪತ್ತು ಸಮೃದ್ಧವಾಗಿದ್ದರೆ ಮಾತ್ರ ಉತ್ತಮ ಚುಟುಕುಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದಕ್ಕೆ ಹದ್ದಿನ ಕಣ್ಣು ಬೇಕು, ಬೆಕ್ಕಿನ ಹೆಜ್ಜೆಯೂ ಬೇಕು. ಸತತ ಅಧ್ಯಯನದಿಂದ ಮಾತ್ರ ಉತ್ತಮ ಚುಟುಕುಗಳು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.  

ಅವರು ಹೊಸಪೇಟೆಯ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವಿಜಯನಗರ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಹೊಸಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉದ್ಘಾಟನೆ, ಪದಗ್ರಹಣ, ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ‘ಚುಟುಕುಗಳಲ್ಲಿ ಹಾಸ್ಯ' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.  

ಅವರು ಮುಂದುವರೆದ ಮಾತನಾಡುತ್ತಾ, ನಗುವುದು ಯೋಗ, ನಗದೇ ಇರುವುದು ರೋಗ. ನಗುವುದು ಸ್ವಧರ್ಮ, ನಗಿಸುವುದು ಪರಧರ್ಮ, ನಗಿಸಿಯೂ ನಗದಿದ್ದರೆ ಅದು ನಗದವನ ಕರ್ಮ. ಬಹುತೇಕರು ತಮ್ಮ ಹಲ್ಲುಗಳನ್ನು ಕೇವಲ ಬ್ರಷ್‌ಗಳಿಗೆ ಮಾತ್ರ ತೋರಿಸುತ್ತಾರೆ. ನಗುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ. ನಗುವುದಕ್ಕೆ ಮಗುವಿನಂತಹ ಮನಸಿರಬೇಕು ಎಂದರು. 

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಪರಿಷತ್ತು ಕೈಗೆತ್ತಿಕೊಂಡವರ ಕೂಸು. ಸರ್ಕಾರದ ಯಾವುದೇ ಸಹಾಯ, ಸಹಕಾರ ಇಲ್ಲದೆ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಸೇವೆಗೆ ಪರಿಷತ್ತು ಸದಾ ಸಿದ್ಧವಾಗಿದೆ. ರಾಜ್ಯದ 26 ಜಿಲ್ಲೆಗಳಲ್ಲಿ ಮತ್ತು ಹೊರನಾಡಿನಲ್ಲಿಂದು ಹಬ್ಬಿಹರಡಿ ತನ್ನ ಛಾಪನ್ನು ಮೂಡಿಸಿದೆ ಎಂದರು. 

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಿ.ಡಿ.ಮುತಾಲಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕವಿ, ಸಾಹಿತಿಗಳು ಯಾವುದೇ ರಾಜಕೀಯ ಪಕ್ಷಗಳ ಬಾಲಂಗೋಚಿಗಳಾಗಿ ಸಾಹಿತ್ಯ ರಚಿಸದೇ; ಸಾಮಾಜಿಕ ಕಳಕಳಿ ಮತ್ತು ಬದ್ಧತೆಯಿಂದ ವಾಸ್ತವತೆಯನ್ನು ಸಾಹಿತ್ಯದ ಮೂಲಕ ತೆರೆದಿಡಬೇಕೆಂದರು. 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಜಿ.ಬಸಪ್ಪ, ಡಾ.ಸುಲೋಚನಾ, ಚಂದ್ರಶೇಖರಯ್ಯ ರೋಣದಮಠ, ಎಂ.ಎಂ.ಶಿವಪ್ರಕಾಶ, ಎಂ.ವಿರೂಪಾಕ್ಷಯ್ಯಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು.  

ಡಾ.ಎತ್ನಳ್ಳಿ ಮಲ್ಲಯ್ಯರ ಅಧ್ಯಕ್ಷತೆಯಲ್ಲಿ 'ಚುಟುಕು ಕವಿಗೋಷ್ಠಿ' ನಡೆಯಿತು. 

ಅನೇಕ ಕವಿಗಳು ಪಾಲ್ಗೊಂಡು ತಮ್ಮತಮ್ಮ ಎರಡೆರಡು ಚುಟುಕುಗಳನ್ನು ವಾಚಿಸಿದರು. 

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಎಲ್‌.ಹಾಲ್ಯಾನಾಯ್ಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಎತ್ನಳ್ಳಿ ಮಲ್ಲಯ್ಯ, ಉಪನ್ಯಾಸಕ ಡಾ.ದಯಾನಂದ ಕಿನ್ನಾಳ, ವಿಜಯನಗರ ಜಿಲ್ಲೆಯ ಕ.ರಾ.ಸ.ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ, ಕ.ಚು.ಸಾ.ಪ. ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಚಿತ್ರಗಾರ ಮತ್ತು ಕ.ಚು.ಸಾ.ಪ.ಹೊಸಪೇಟೆ ತಾಲೂಕು ಘಟಕದ ಗೌರವಾಧ್ಯಕ್ಷರಾದ ಕೆ.ಎಂ.ಬಸವರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷರಾದ ಉದೇದಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. 

ಹೊಸಪೇಟೆ ಗೃಹರಕ್ಷಕ ದಳದ ಘಟಕಾಧಿಕಾರಿ ವಾಲ್ಯಾ ನಾಯ್ಕ ಪ್ರಾರ್ಥಿಸಿದರು. ಕ.ಚು.ಸಾ.ಪ.ವಿಜಯನಗರ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪರಶುರಾಮ ಸ್ವಾಗತಿಸಿದರು. ಎನ್‌.ನಾಗರಾಜ ಸಿ.ಆರ್‌.ಪಿ. ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಯರಿಸ್ವಾಮಿ ನಿರೂಪಿಸಿದರು. ಸುನೀತಾ ವಂದಿಸಿದರು. 


ಸುದ್ದಿ ಓದಿ