ಯರಗಟ್ಟಿ

ಚುಟುಕು ಜನಪ್ರಿಯ ಸಾಹಿತ್ಯ ಪ್ರಕಾರ: ಪ್ರೊ. ಕೋಲಕಾರ

ಚುಟುಕು ಜನಪ್ರಿಯ ಸಾಹಿತ್ಯ ಪ್ರಕಾರ: ಪ್ರೊ. ಕೋಲಕಾರ

ಯರಗಟ್ಟಿ 25: ಯಾಂತ್ರಿಕ ಯುಗದ ಗಡಿಬಿಡಿಯ ಬದುಕಿನಲ್ಲಿ ಸುದೀರ್ಘ ಕಾವ್ಯ, ಕಾದಂಬರಿಗಳನ್ನು ಓದುವ ವ್ಯವಧಾನ ಕಡಿಮೆಯಾಗಿದೆ. ಹೀಗಾಗಿಯೇ ಸ್ವಲ್ಪದರಲ್ಲಿ ಸ್ವಾರಸ್ಯವನ್ನು ಸೂಸುವ ಚುಟುಕು ಪ್ರಕಾರ ತುಂಬ ಜನಪ್ರಿಯತೆ ಪಡೆಯುತ್ತಿದೆ ಎಂದು ಬೆಳಗಾವಿಯ ಆರ್‌.ಪಿ.ಡಿ. ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಚ್‌. ಬಿ. ಕೋಲಕಾರ ಅಭಿಪ್ರಾಯ ಪಟ್ಟರು. 

ಪಟ್ಟಣದ ಬಸವೇಶ್ವರ ಪ್ರೌಢ ಶಾಲಾ ಸಭಾಂಗಣದಲ್ಲಿ  ಯರಗಟ್ಟಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚುಟುಕು ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದ ಅವರು, ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕೌಟುಂಬಿಕ ಜೀವನದ ನಾನಾ ರಂಗಗಳಲ್ಲಿ ಚುಟುಕು ತನ್ನ ಅಸ್ತಿತ್ವವನ್ನು ತೋರಿ​‍್ಡಸುತ್ತಿದೆ. ಜಿ.ಪಿ. ರಾಜರತ್ನಂ ಮೊದಲ ಬಾರಿಗೆ ನಾಲ್ಕು ಸಾಲಿನ ಪದ್ಯ ಬರೆದು ಅದಕ್ಕೆ ಚುಟುಕು ಎಂದು ಕರೆದರು.  

ಸಂಸ್ಕೃತದಲ್ಲಿ ಈ ಬಗೆಯ ಪದ್ಯ ಪ್ರಕಾರಕ್ಕೆ ಚಾಟು ಪದ್ಯ ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ ಲಿಮರಿಕ್ ಎಂದು ಹೇಳಲಾಗುತ್ತದೆ. ಚುಟುಕಿನ ಬೇರುಗಳನ್ನು ಕನ್ನಡದ ಜಾನಪದ ತ್ರಿಪದಿಗಳಲ್ಲಿ, ಸರ್ವಜ್ಞನ ವಚನಗಳಲ್ಲಿ ಹಾಗೂ ಶರಣರ ವಚನಗಳಲ್ಲಿ ಗುರುತಿಸಬಹುದು ಎಂದರು. 

ಚುಟುಕು ಪ್ರಕಾರಗಳಲ್ಲಿ ಅನೇಕರು ದುಡಿದಿದ್ದಾರೆ. 

ಚುಟುಕು ಬ್ರಹ್ಮ ದಿನಕರ ದೇಸಾಯಿಯಿಂದ ಆದಿಯಾಗಿ ಎಂ. ಅಕ್ಬರ್ ಅಲಿ, ವಿ.ಜಿ. ಭಟ್, ಚನ್ನವೀರ ಕಣವಿ, ಪಂಚಾಕ್ಷರಿ ಹಿರೇಮಠ, ದೇವಾನಾಂಪ್ರಿಯ, ಶ್ಯಾಮ ಹುದ್ದಾರ, ಜಿ.ಎಸ್‌. ಅನ್ನದಾನಿ, ವಿಡಂಬಾರಿ ಇಡಗುಂಜಿ, ಶಂ.ಗು. ಬಿರಾದಾರ, ನಾರಾಯಣ ಕಾಗಾಲ, ಶ್ರೀನಿವಾಸ ಶೆಟ್ಟಿ, ಅಪ್ಪಾಸಾಹೇಬ ಅಲಿಬಾದಿ ಮತ್ತಿತರರು ಚುಟುಕು ಸಾಹಿತ್ಯದ ಸಮೃದ್ಧಿಗೆ ಕಾರಣರಾಗಿದ್ದಾರೆ. 

ದಿನಕರ ದೇಸಾಯಿಯವರ ಚೌಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಚುಟುಕುಗಳನ್ನು ಬರೆದು ಶ್ರೀಮಂತ ಪರಂಪರೆಯನ್ನು ಹಾಕಿಕೊಟ್ಟರು.  

ಇಂದು ಅನೇಕ ಯುವಕರು ಈ ಪರಂಪರೆಯ ವಾರಸುದಾರರಾಗಿ ಚುಟುಕು ರಚನೆಯಲ್ಲಿ ತೊಡಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಶರಣು ಸಾಹಿತ್ಯ ಪರಿಷತ್ತಿನಂತೆ ಚುಟುಕು ಸಾಹಿತ್ಯ ಪರಿಷತ್ತು ಸಂಘಟಿತವಾಗಿ ತಾಲೂಕು, ಜಿಲ್ಲೆಗಳಲ್ಲಿ ಘಟಕಗಳು ರೂಪಿತವಾಗಿ ರಾಜ್ಯವ್ಯಾಪಿ ಹಬ್ಬಿರುವುದು ಅದರ ಮಹತ್ವವನ್ನು ಎತ್ತಿ ಹೇಳುತ್ತಿದೆ. ಇದರೊಟ್ಟಿಗೆ ಚುಟುಕು ಸಾಹಿತ್ಯ ವಿಫುಲವಾಗಿ ರಚನೆಯಾಗುತ್ತಿದೆ ಎಂದು ಪ್ರತಿಪಾದಿಸಿದರು. 

ಇದಕ್ಕೂ ಮೊದಲು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ರಾಘವೇಂದ್ರ ದೇಶಪಾಂಡೆಯವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಯರಗಟ್ಟಿ ತಾಲೂಕು ಚು.ಸಾ.ಪ. ಅಧ್ಯಕ್ಷ ವೆಂಕನಗೌಡ ಪಾಟೀಲ, ರಾಮೇಶಗೌಡ ದೇವರಡ್ಡಿ, ಕಸಾಪ ಅಧ್ಯಕ್ಷ ಟಿ. ಎಂ. ಕಾಮಣ್ಣವರ, ಡಾ. ರಾಜಶೇಖರ ಬಿರಾದಾರ, ಡಾ. ಮಲ್ಲಿಕಾರ್ಜುನ ಇಂಚಲ, ಭಾಸ್ಕರ ಹಿರೇಮೆತ್ರಿ, ಎನ್‌.ಕೆ. ಹುಚ್ಚರಡ್ಡಿ, ಪಿ.ಎಚ್‌. ಪಾಟೀಲ, ಆರ್‌.ಎಲ್‌. ಜೂಗನವರ, ಎಸ್‌.ಎಸ್‌. ಕುರುಬಗಟ್ಟಿಮಠ, ರಾಜೇಂದ್ರ ಶೆಟ್ಟಿ, ಡಾ. ಕುಮಾರ ದಾಸರ, ಮಂಜುನಾಥ ತಡಸಲೂರ, ನಿಲಯ ಪಾಲಕರಾದ ಎಸ್‌. ಬಿ. ಮದ್ದಾನಿ, ಶ್ರೀಮತಿ ಆಶಾ ಪರೀಟ, ಪೈಗಂಬರ ನದಾಫ, ವಿಠಲ ದಳವಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ