ಪರಿಸರ ಶುದ್ಧಿಕರಣಕ್ಕಾಗಿ ಮಕ್ಕಳು ಗಿಡಗಳನ್ನು ನೆಟ್ಟು ಪೋಷಿಸಿ
ಅರವಿಂದರಾವ ದೇಶಪಾಂಡೆ ಕರೆ: ಆರ್.ಡಿ.ಪ್ರೌಢ ಶಾಲೆಯ ಶತಮಾನೋತ್ಸವ: 10 ಸಾವಿರ ಸಸಿಗಳ ವಿತರಣೆ
ಚಿಕ್ಕೋಡಿ 25: ಸಮಾಜದ ಸ್ವಾಸ್ತ್ಯ ಕಾಪಾಡಲು ಶುದ್ಧವಾದ ಪರಿಸರ ನಿರ್ಮಾಣವಾಗಬೇಕಿದೆ. ಮನುಷ್ಯ ಆರೋಗ್ಯ ಸುಧಾರಣೆಗೆ ಶುದ್ಧವಾದ ವಾತಾವರಣ ನಿರ್ಮಾಣವಾಗಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಉತ್ತರ ಕರ್ನಾಟಕದ ಆರ್ಎಸ್ಎಸ್ ಮುಖಂಡರಾದ ಅರವಿಂಧರಾವ ದೇಶಪಾಂಡೆ ಹೇಳಿದರು.
ಇಲ್ಲಿನ ಸಿಟಿಇ ಸಂಸ್ಥೆಯ ಆರ್.ಡಿ.ಪ್ರೌಢ ಶಾಲೆಯ ಶತಮಾನೋತ್ಸವ ನಿಮಿತ್ಯ ಸಿಟಿಇ ಸಂಸ್ಥೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 10 ಸಾವಿರ ಸಸಿಗಳ ವಿತರಣೆಯ ವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಲುಷಿತ ವಾತಾವರಣದಲ್ಲಿ ಮನುಷ್ಯನ ಆರೋಗ್ಯ ಸುಧಾರಿಸುವುದು ಅವಶ್ಯಕವಾಗಿದೆ. ಹೆಚ್ಚು ಹೆಚ್ಚು ವಿಷಮುಕ್ತ ಆಹಾರ ಮತ್ತು ಹಣ್ಣಿನ ಸೇವನೆ ಮಾಡಬೇಕಿದೆ. ಸಿಟಿಇ ಸಂಸ್ಥೆಯ ಆಡಳಿತ ಮಂಡಳಿ ಹೆಚ್ಚಿಗೆ ಹಣ್ಣಿನ ಗಿಡಗಳನ್ನು ಮಕ್ಕಳಿಗೆ ವಿತರಣೆ ಮಾಡುತ್ತಿರುವುದು ಸಂತಸ ತರಿಸಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಚಿಕ್ಕೋಡಿ ಭಾಗದಲ್ಲಿ ಶಾಲೆ ಆರಂಭಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದ ಸಂಸ್ಥೆಯು ಶತಮಾನ ಪೂರೈಯಿಸಿದೆ. ಈ ದಿಸೆಯಲ್ಲಿ ವರ್ಷ ಪೂರ್ತಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಅರ್ಥಪೂರ್ಣ ಶತಮಾನೋತ್ಸವ ಆಚರಿಸುತ್ತಿರುವುದು ಖುಷಿ ತರಿಸಿದೆ ಎಂದರು.
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಚಿಕ್ಕೋಡಿಯ ಭಾಗದಲ್ಲಿ ಪ್ರಥಮವಾಗಿ ಶಾಲೆ ಆರಂಭಿಸಿ ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಿರುವುದು ಆರ್.ಡಿ.ಕಾಲೇಜು. ಇಂತಹ ಗುಣಮಟ್ಟ ಶಿಕ್ಷಣ ಪಸರಿಸುತ್ತಿರುವ ಸಂಸ್ಥೆಯು ಶತಮಾನ ಕಂಡಿದೆ. ಕಾಡಾಚಾರಕ್ಕೆ ಶತಮಾನೋತ್ಸವ ಕಾರ್ಯಕ್ರಮ ಆಗಿರದೇ ಇದೋಂದು ಕ್ರಾಂತಿಕಾರ ಕಾರ್ಯಕ್ರಮ ಆಗಬೇಕು. ಪರಿಸರ ಸ್ವಚ್ಚವಾಗಿರಲು ಚಿಕ್ಕೋಡಿ ನಗರದ ಸುಮಾರು 10 ಸಾವಿರ ಮಕ್ಕಳಿಗೆ ಸಸಿಗಳನ್ನು ವಿತರಿಸುವುದು ದೊಡ್ಡ ಕೆಲಸವಾಗಿದೆ ಎಂದರು.
ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ನಾಗರಿಕರು. ಹೀಗಾಗಿ ಶಾಲೆಯ ಸಂಸ್ಥೆಯವರು ನೀಡಿದ ಸಸಿಗಳನ್ನು ಪೋಷಣೆ ಪಾಲನೆ ಮಾಡಿ ಗಿಡಗಳನ್ನು ಬೆಳೆಸಬೇಕಾಗಿದೆ. ಯಾರು ಎಷ್ಟೇಷ್ಟು ಗಿಡಗಳನ್ನು ಬೆಳೆಸುತ್ತಾರೆ ಎಂಬುದನ್ನು ಶಿಕ್ಷಕರು ಗಮನ ಹರಿಸಬೇಕು. ಶಾಲಾ ಪಾಠ್ಯದಂತೆ ಗಿಡಗಳ ಬೆಳೆಸುವಿಕೆಗಾಗಿ ಗಮನ ಹರಿಸುವುದು ಸೂಕ್ತವಾಗಿದೆ ಎಂದರು.
ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಉಪಾಧ್ಯಕ್ಷ ವಿಜಯ ಮಾಂಜ್ರೇಕರ, ನಿರ್ದೇಶಕರಾದ ಸಂಜಯ ಅಡಕೆ, ಓಂಕಾರ ಕುಲಕರ್ಣಿ, ಸಂಕೇತ ಮಾಂಜ್ರೇಕರ, ಎ.ಎಸ್.ಕುಲಕರ್ಣಿ, ಸತ್ಯನಾರಾಯಣ ವೇರ್ಣಿಕರ, ಜಂಟಿ ನಿರ್ದೇಶಕ ಎಸ್.ಜಿ.ಜಹಾಗೀರದಾರ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಶ್ರೀಶೈಲ ಬಾನಸೆ, ಪ್ರಭಾಕರ ಗೋಕಾಕ, ವಿನಯ ಪ್ರಧಾನಿ, ಅಡಿವೇಪ್ಪ ಪಾಟೀಲ, ಶಂಕರ ತಾಂಸಿ, ಮಲ್ಲಪ್ಪ ಕದಂಪೂರ, ಶ್ರೀಧರ ಮುಂಡೆ ಮುಂತಾದವರು ಇದ್ದರು.
ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಸ್ವಾಗತಿಸಿದರು. ಉಪನ್ಯಾಸಕ ಪಿ.ಸಿ.ಮನಗೂಳಿ ನಿರೂಪಿಸಿದರು.